Sunday, 13 September 2009

ನಿಮ್ಮ ಶರೀರದ ಯಾವುದೇ ಭಾಗವನ್ನು ಹೊರ ಚಾಚ ಬೇಡಿ

ಇತ್ತೀಚಿಗೆ ಟಿ ವಿ ಯಲ್ಲಿ ನೆಟ್ಟಲ್ಲಿ ಎಲ್ಲಿ ನೋಡಿದರು ಒಂದು ವಿಶೇಷ ಚರ್ಚೆ ನಿಮಗೆಲ್ಲ ಗೊತ್ತೇ ಇದೆ. ಕೆಲವು ದಿನಗಳ ಹಿಂದೆ ಅರ್ದಂಬರ್ದ ಬಟ್ಟೆ ಹಾಕಿದ್ದರು ಎಂದು ಗಲಾಟೆ ನಡೆಯಿತು. ಈಗ ನಡೆದದ್ದು ಪೂರ್ತಿ ಬಟ್ಟೆ ಹಾಕಿದ್ದಾರೆ ಅಂತ. ಇದೆಲ್ಲ ಕೇಳುತ್ತಾ ನೋಡುತ್ತಾ ಇದ್ದ ನನಗೆ ನೆನೆಪಾದದ್ದು ಒಂದು ವಿಶೇಷ ದಿನದ ಅಂದಿನ ನಾನು ಮತ್ತು ಪರೇಶ ದಾವಣಗೆರೆಗೆ ಒಂದು ಮದುವೆಗೆ ಹೋಗಿ ಬರುವಾಗ ನಡೆದ ಬಸ್ಸಿನಲ್ಲಿನ ಘಟನೆ.

ಬೆಳಗ್ಗೆ ಬೇಗ ರೆಡಿಯಾಗಿ ನಾನು ಪರೇಶ ಶಿವಮೊಗ್ಗದ ಬಸ್ಟಾಂಡ್ ನಿಂದ ದಾವಣಗೆರೆ ಬಸ್ಸು ಹತ್ತಿ ದಾವಣಗೆರೆ ತಲುಪಿ ಮದುವೆ ಮತ್ತು ಊಟ ಮುಗಿಸಿ ಸಮಾಜಸೇವೆಯಲ್ಲಿ ತೊಡಗಿದ್ದ ಪರೆಶನನ್ನು ಕರೆದುಕೊಂಡು ದಾವಣಗೆರೆಯಿಂದ ಶಿವಮೊಗ್ಗದ ಬಸ್ಸು ಹತ್ತಿ ಕೂತೆ. ಬಸ್ಸಲ್ಲಿ ಅಷ್ಟೇನೂ ಜನ ಇರಲಿಲ್ಲ ಕಾರಣ ಭಾನುವಾರ ಬೇರೆ, ಇನ್ನೇನು ಬಸ್ಸು ಹೊರಡ ಬೇಕು ಎನ್ನುವಷ್ಟರಲ್ಲಿ ೫-೬ ಹುಡುಗಿಯರೂ ಮತ್ತು ೨ ಹುಡುಗರು ಬಸ್ಸು ಹತ್ತಿದರು ಅವರನ್ನು ನೋಡುತ್ತಿದ್ದಂತೆಯೇ ತಿಳಿಯಿತು ಮೆಡಿಕಲ್ ವಿದ್ಯಾರ್ಥಿಗಳು ಅಂತ. ಅಲ್ಲಿಗೆ ಬಸ್ಸಿನಲ್ಲಿ ಸುಮಾರು ೨೫ ರಿಂದ ೩೦ ಜನ ಆದರು. ಬಸ್ಸು ಹೊರಟಿತು.

ಆ ಹುಡಗಿಯರು ಸ್ವಲ್ಪ ಮಾಡ್ ಇದ್ದರು, ಅಂದರೆ ಅವರ ಬಟ್ಟೆ ಸ್ವಲ್ಪ ಬಿಗಿಯಾಗಿ, ಕಡಿಮೆಯಾಗಿ, ಶರೀರದ ಉಬ್ಬು ತಗ್ಗುಗಳು ಆಚೆ ಈಚೆ ಬಾಗಿದಾಗ ಶರೀರ ಕಾಣುತಿತ್ತು. ಅದಲ್ಲದೆ ಒಂದೆಡೆ ಕೂರದೆ ಆ ಹುಡುಗಿಯರು ಇಲ್ಲಿಂದ ಅಲ್ಲಿಗೆ ಓಡುವುದು ಕೂಗುವುದು ಕೆಲ ಚಿಕ್ಕ ಪುಟ್ಟ ವಸ್ತುಗಳನ್ನು ಆಚೆ ಈಚೆ ಎಸೆಯುತ್ತ ಅಂದರೆ ತಮ್ಮ ಸ್ನೇಹಿತರೊಂದಿಗೆ ಆಡುತ್ತ ಗಲಾಟೆ ಮಾಡುತ್ತಿದ್ದರು.

ಇದೆಲ್ಲ ನೋಡುತ್ತಾ ಎಲ್ಲರು ಸುಮ್ಮನೆ ಕುಳಿತಿದ್ದರು, ಆದರೆ ಪರೆಶನಿಗೆ ಮಾತ್ರ ಅವರ ನಾಟಕ ಸಹಿಸಲು ಸಾಧ್ಯವಾಗುತ್ತಿಲ್ಲ, ಒಮ್ಮೆ ನನ್ನ ಕಡೆ ನೋಡುತ್ತಾ ಒಮ್ಮೆ ಅವರ ಕಡೆ ನೋಡುತ್ತಾ ಏನ್ಸಾರ್ ಇದು ಒಳ್ಳೆ ತಿಕ್ಲು ಹಿಡಿದಂಗೆ ಮಾಡ್ತಾವ್ರೆ ಅಂದ, ಅದಕ್ಕೆ ನಾನಂದೆ ಏನಾರು ಮಾಡ್ಕೊಳ್ಳಿ ನೀ ಸುಮ್ನೆ ಕೂತ್ಕೋ ಅಂದೇ, ಕಾರಣ ನನಗೆ ಹೆದರಿಕೆ ಹುಡುಗಿಯರು ಅಂದಮೇಲೆ ಕೇಳಬೇಕ ಬಸ್ಸಿನ ಜನ ಎಲ್ಲ ಸೇರಿಕೊಂಡು ನಮ್ಮನ್ನ ಹೊಡೆಯೋದು ಗ್ಯಾರಂಟಿ. ಅದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಹುಡಗಿಯರು ಹೇಳಿದ್ದು ಸರಿ ಮಾಡಿದ್ದು ಸರಿ. ಹೀಗಿರುವಾಗ ಮದುವೆ ಊಟ ಬಸ್ಸಲ್ಲಿ ಖಾಲಿಯಾಗಬಹುದು.

ಇದ್ದಕಿದ್ದಂತೆ ಪರೇಶ ಎದ್ದು ನಿಂತು ಜೋರಾಗಿ ಎ ನೀವೇನ್ ಪ್ರಾಣಿಗಳ ಮನುಷ್ಯರ ಸುಮ್ನೆ ಕುನ್ತುಕೊಳ್ರೆ ಸಾಕು ನಿಮ್ ನಾಟ್ಕ. ಇದು ನಿಮ್ ಮನೆ ಅಲ್ಲ ಸಾರ್ವಜನಿಕ ಬಸ್ಸು ಅಂದ, ಅಷ್ಟರಲ್ಲಿ ಒಂದು ಹುಡುಗಿ ಎದ್ದು ನಿಂತು ನಿಮ್ ಅಪ್ಪಂದ ಬಸ್ಸೂ ಕುಂತ್ಕೋ ಸಾಕು ಅಂದು ಬಿಟ್ಟಳು. ಅಷ್ಟು ಸಾಕಿತ್ತು ಪರೆಶಂಗೆ ಶುರು ಮಾಡಿದ ಭಾಷಣ ಅಲ್ವೇ ಹಲ್ಕಾ ಮುಂಡೆ ನಂ ಅಪ್ಪಂದ್ ಬಸ್ ಆಗಿದ್ರೆ ನಿನಿಗೆಲ್ಲೇ ಹತಾಕ್ ಬಿಡ್ತಿದ್ದೆ ಕೆರ ತಗೊಂಡು ಹೊಡಿತೀನ್ ನೋಡು ಕುಂತ್ಕೊಳೆ ಸಾಕು. ಇಲ್ಲಿ ಬಸ್ಸಲ್ಲಿ ದೊಡ್ದವರು ಚಿಕ್ಕವರು ಮನುಷ್ಯರು ಕುಂತಿದಾರೆ ಅಂತ ಗೊತ್ತಿಲ್ಲ ಸ್ವಲ್ಪ ಮರ್ಯಾದೆ ಕಲ್ತ್ಕೊಳೆ ಬರಿ ಕಾಲೇಜ್ ಹೋದ್ರೆ ಸಾಕಿಲ್ಲ ಬೆವರ್ಸಿಗಳ ಅಂತ ಬೈದ, ಚಿಕ್ಕ ಚಿಕ್ಕ ಬಟ್ಟೆ ಹಾಕೊಂಡು ಮೈ ತೋರಿಸ್ಕೊಂಡು ಎನಿದ್ ನಿಮ್ ನಾಟ್ಕ ಅಂದ.

ನಾವೇನಾದ್ರೂ ಮಾಡ್ತೀವಿ ನಿಂದೇನ್ ರೂಲ್ಸ್ ಮುಚ್ಕೊಂಡ್ ಕುಂತ್ಕೋ ಅಂದ್ಲು ಮತ್ತೊಂದು ಹುಡುಗಿ. ಹೌದೆ ರೂಲ್ಸ್ ಕಣೆ ನಾನ್ ಮಾಡಿದ್ದಲ್ಲ ಬಸ್ಸಲ್ಲಿ ಬರ್ದೈತ ನೋಡ್ಬಾ ಇಲ್ಲಿ, ಎಲ್ಲ ಬಾಳ ಓದಿದೀರಲ್ಲ ಇಲ್ಲೇನ್ ಬರ್ದೈತೆ ನೋಡೇ ನಿರ್ವಾಹಕರ ಆಸನ - ಟಿಕೇಟು ಕೇಳಿ ಪಡೆಯಿರಿ - ಧೂಮಪಾನ ನಿಷೇದಿಸಿದೆ - ಇಲ್ ನೋಡು ದೊಡ್ ದಾಗ್ ಏನ್ ಬರ್ದೈತೆ
" ನಿಮ್ಮ ಶರೀರದ ಯಾವುದೇ ಭಾಗವನ್ನು ಹೊರ ಚಾಚ ಬೇಡಿ " ಇದು ಯಾಕ ಬರ್ದಿದಾರೆ ಅಂತ ಹೇಳುದ್ರೆ ನಿಮ್ಮಂತ ಹುಡುಗಿಯರು ಕಡಿಮೆ ಬಟ್ಟೆ ಹಾಕಿ ಮೈ ಯಲ್ಲ ತೋರಿಸ್ತಾರಲ್ಲ ಅದಕ್ಕೆ ಬರ್ದಿರೋದು. ಇಷ್ಟು ಹೇಳುತ್ತಿದ್ದಂತೆ ಇಡಿ ಬಸ್ಸೂ ಗೊಳ್ಳೆಂದು ನಗತೊಡಗಿತು ಅಷ್ಟರಲ್ಲಿ ಪರಿಸ್ಥಿತಿಯ ಒತ್ತಡ ಅರಿತ ಹುಡುಗಿಯರು ಸುಮ್ಮನಾಗಿ ಬಿಟ್ಟರು.

ಅಷ್ಟರಲ್ಲಿ ನಾನು ಪರೆಶನ ಹತ್ರ ನಿಧಾನವಾಗಿ ಅಲ್ಲ ಕಣೋ ಪರೇಶ ಅದರ ಅರ್ಥ ಹಂಗಲ್ಲ ಕಣೋ ಅನ್ನು ವಷ್ಟರಲ್ಲಿ ಸಾರ್ ಸುಮ್ನೆ ಕೂರ್ತೀರ ಸ್ವಲ್ಪ ಇಷ್ಟ ಹೊತ್ತು ನಿಮ್ಮ ಅರ್ಥ ಎಲ್ಲ ಎಲ್ ಹೋಗಿತ್ತು ಬಂದ್ ಬಿಟ್ಟ್ರು ಅರ್ಥ ಹೇಳಾಕ್ಕೆ. ಅದು ಸರಿಯಾಗೇ ಬರ್ದಿರೋದು ಇದು ಹುಡುಗಿಯೋರಿಗೆ ಬರ್ದಿರೋದು.

ಈ ಬೋರ್ಡ್ ಎಲ್ಲ ಕಡೆ ಬರಿ ಬೇಕು ಸಾರ್ " ನಿಮ್ಮ ಶರೀರದ ಯಾವುದೇ ಭಾಗವನ್ನು ಹೊರ ಚಾಚ ಬೇಡಿ " ಅಂತ
,,,,,,,, ?
ಹಂಗಾದ್ರು ಸರ್ಯಾಗತಾವೇನೋ ನೋಡ್ಬೇಕು ಅಂತ ಶುರು ಮಾಡಿದ ,,,,,,,,

ಯಾರಿವಳು ?

ಅವಳು ನನ್ನ ಕಾಡುತ್ತಾಳೆ ಅವಳು

ನನ್ನ ಓರೆ ಕಣ್ಣಿನಲ್ಲಿ ನೋಡುತ್ತಾಳೆ

ಅವಳು ನನ್ನ ಮುಂದೆ ಓಡುತ್ತಾಳೆ

ಅವಳು ನನ್ನ ಮುಂದೆ ಆಡುತ್ತಾಳೆ

ಅವಳು ನನ್ನ ನಗಿಸುತ್ತಾಳೆ

ಅವಳು ನನ್ನ ಅಳಿಸುತ್ತಾಳೆ

ಆವಳು ನನ್ನ ಕರೆಯುತ್ತಾಳೆ

ಅವಳು ನನ್ನ ಜರಿಯುತ್ತಾಳೆ

ಅವಳು ನನ್ನ ಮರೆಯುತ್ತಾಳೆ

ಅವಳು ನನ್ನ ನೆನೆಪಿಸಿಕೊಳ್ಳುತ್ತಾಳೆ

ಅವಳು ನನ್ನ ಹೊಡೆಯುತ್ತಾಳೆ

ಅವಳು ನನ್ನ ನೋಡಿ ಕಣ್ಣು ಮಿಟುಕಿಸುತ್ತಾಳೆ

ಅವಳು ನನ್ನ ಪ್ರೀತಿಸುತ್ತಾಳೆ

ಅವಳು ನನ್ನ ಮನೆಗೆ ಬರುತ್ತಾಳೆ

ಅವಳು ಅವಳ ಮನೆಗೆ ನನ್ನ ಕರೆಯುತ್ತಾಳೆ

ಅವಳು ನನ್ನ ನದಿ ದಂಡೆಗೆ ಕರೆಯುತ್ತಾಳೆ

ಅವಳು ನನ್ನ ,,,,,,?

Friday, 4 September 2009

ಸಿಂಗಲ್ ಬೆಡ್ ರೂಂ ಫ್ಲಾಟ್ ೨ ಬೆಡ್ ರೂಂ ಅದಾಗ

ಎಲ್ಲ ತಂದೆ ತಾಯಿಯರ ಆಸೆಯಂತೆ ನಾನು ಸಹ ಸಾಫ್ಟ್ವೇರ್ ಇಂಜಿನಿಯರ್ ಆಗಿ ಅಮೇರಿಕಾ ತಲುಪಿದೆ. ತಲುಪಿದ ಆ ಕ್ಷಣ ನಾನು ಆಕಾಶದಲ್ಲಿ ಹಾರುತ್ತ ನಕ್ಷತ್ರಗಳನ್ನು ಎಣಿಸುತ್ತ ಚಂದ್ರನನ್ನು ಮುಟ್ಟುತ್ತ ಪಕ್ಷಿಯಂತೆ ವಿಹರಿಸುತ್ತಾ ಮಳೆಯಲ್ಲಿ ನೀರಾಗಿ ಮುಸುಕಿನಲ್ಲಿ ಮಂಜಾಗಿ ತಂಪಿನಲಿ ಚಳಿಯಾಗಿ ಭಾವನೆಗಳಲಿ ಮಿಂದು ಸ್ವಪ್ನ ಲೋಕದಲಿ ವಿಹರಿಸ ತೊಡಗಿದೆ.

ನನ್ನ ಜೀವನದ ಅತ್ತ್ಯುನ್ನತ ಆಕಾಂಕ್ಷೆಯಾಗಿದ್ದ ಅಮೆರಿಕಾದಲ್ಲಿ ತಲುಪಿದೆನಲ್ಲ ಆಹಾ ನಾನೆಷ್ಟು ಸುಖಿ. ಸಾಕು ಇನ್ನು ೫ ವರ್ಷ ಕಷ್ಟ ಪಟ್ಟು ಬೇಕಾದಷ್ಟು ಹಣ ಮಾಡಿ ಭಾರತಕ್ಕೆ ಹಿಂದಿರುಗುವುದು. ನಂತರ ಒಂದು ಒಳ್ಳ್ಯೇ ಲೈಫ್ ಲೀಡ್ ಮಾಡುವುದು ಬಾಕಿ ಎಲ್ಲ ತನ್ನಷ್ಟಕ್ಕೆ ತಾನೆ ಬರುತ್ತದೆ ಬಿಡು ಮತ್ತೇನು ಬೇಕು ಇದು ನನ್ನ ತೀರ್ಮಾನವಾಗಿತ್ತು.

ಕಾರಣ ನನ್ನ ತಂದೆ ಸರ್ಕಾರಿ ನೌಕರಿಯಲ್ಲಿದ್ದರು ಅದರಿಂದ ಅವರು ಜೀವನದಲ್ಲಿ ಮಾಡಿದ್ದು ಒಂದು ಸಿಂಗಲ್ ಬೆಡ್ ರೂಂ ಫ್ಲಾಟ್ ಅಷ್ಟೆ ಆದರೆ ನಾನು ಹಾಗಾಗಬಾರದು. ಅವರಿಗಿಂತ ಉನ್ನತ ಸ್ಥಾನಕ್ಕೆ ತಲುಪಬೇಕು ಇದೆ ಯೋಚನೆಯಲ್ಲಿ ನಾನು ಕೆಲಸದಲ್ಲಿ ಮುಳುಗಿದೆ ಆದರೆ, ಕೆಲವೇ ದಿನಗಳಲ್ಲಿ ನನಗೆ ನನ್ನ ಊರು ನೆನಪಾಗತೊಡಗಿತು ಮತ್ತೆ ಮತ್ತೆ ಒಂಟಿತನ ಕಾಡತೊಡಗಿತು. ಪ್ರತಿ ವಾರ ಊರಿಗೆ ಫೋನ್ ಮಾಡಿ ಮಾತನಾಡತೊಡಗಿದೆ ಅದರಲ್ಲೂ ಕಡಿಮೆಬೆಲೆಯಲ್ಲಿ ಲಬ್ಯವಿರುವ ಅಂತರಾಷ್ಟ್ರೀಯ ಕರೆಗಳನ್ನು ಮಾಡುವ ಕಾರ್ಡುಗಳನ್ನು ಹುಡುಕಿ ತೆಗೆದು ತಂದು ಊರಿಗೆ ಕರೆಗಳನ್ನು ಮಾಡತೊಡಗಿದೆ. ಹೀಗೆ ೨ ವರ್ಷ ಕಳೆದು ಹೋಯಿತು ಅದು ಹೇಗೆ ಕಳೆದು ಹೋಯಿತು ಎಂಬುದು ತಿಳಿಯಲಿಲ್ಲ ಕಾರಣ ನಾನು ಲೆಕ್ಕ ಚಾರಗಳಲ್ಲಿ ಮುಳುಗಿದ್ದೆ ತಿಂಡಿ ತಿಂದದ್ದು ಊಟ ಮಾಡಿದ್ದು ಸೋಪು ತಂದದ್ದು ಹೇರ ಕಟ್ ಮಾಡಿಸಿದ್ದು, ಬರೆಯುವುದು. ಶೇವ್ ಮಾಡುವ ಖರ್ಚನ್ನು ಕಡಿಮೆ ಮಾಡುವ ಉದ್ದೇಶದಿಂದ ಗಡ್ಡ ಬಿಡುವುದು ಶುರುಮಾಡಿದೆ. ಬೆಳಗ್ಗೆ ತಿಂಡಿಗೆ ಬ್ರೆಡ್ಡನ್ನು ಟೀ ಯಲ್ಲಿ ಅದ್ದಿ ತಿನ್ನ ತೊಡಗಿದೆ. ಆಫಿಸಿಗೆ ನಡೆದುಕೊಂಡು ಹೋಗತೊಡಗಿದೆ ಅದಕ್ಕಾಗೆ ಮುಂಜಾನೆ ೨ ಗಂಟೆ ಬೇಗ ಏಳತೊಡಗಿದೆ ಇದರಿಂದ ಬಸ್ಸಿನ ಹಣ ಉಳಿಯತೊಡಗಿತು, ರಾತ್ರಿ ಬೇಗ ಲೈಟ್ ಆಫ್ ಮಾಡಿ ಮಲಗಿಬಿಡುತ್ತಿದ್ದೆ.

ಎಷ್ಟೆಲ್ಲ ಆದರು ಒಂದು ಕೊರತೆ ಕಾಡುತ್ತಲೇ ಇತ್ತು ಅದು ಮದುವೆ ಎಂಬ ವಿಷಯ ಅದರ ಯೋಚನೆಯಲ್ಲಿಯೇ ೫ ವರ್ಷಗಳು ಕಳೆದುಹೋಯ್ತು, ಕಾರಣ ಊರಿಗೆ ಹೋಗಲು ರಜಾ ಸಿಗುತ್ತಿರಲಿಲ್ಲ ಈ ಸಾರಿ ಅದ್ಹೇಗೋ ೧೦ ದಿನದ ರಜಾ ಸಿಕ್ಕಿತು. ಕೂಡಲೇ ತಂದೆ ತಾಯಿಯರಿಗೆ ತಿಳಿಸಿ ಹೊರಟೆ, ಇಲ್ಲಿ ಬಂದು ನೋಡಿದಾಗ ೮-೧೦ ಹುಡುಗಿಯರ ಫೋಟೋಗಳು ತಯಾರಾಗಿದ್ದವು ಅಮೆರಿಕಾದ ಗಂಡಿಗೆ ಹೆಣ್ಣುಗಳ ಕೊರತೆ ಇದೆಯೇ ಎಂಬಂತೆ, ಆದರೆ ಮನಸ್ಸಿಗೆ ಯಾವುದು ಇಷ್ಟವಾಗಲಿಲ್ಲ ಆದರೆ ಏನು ಮಾಡುವುದು ೧೦ ದಿನದಲ್ಲಿ ೫ ರಜಾ ಮುಗಿದಿತ್ತು ಯಾವುದೊ ಒಂದನ್ನು ಮದುವೆಯಾಗಿ ಅವಳನ್ನು ಕರೆದುಕೊಂಡು ಅಮೆರಿಕಾಗೆ ಹೊರಟೆ ನಾನು ಮತ್ತೊಂದು ಲೋಕದಲ್ಲಿ ಮುಳುಗಿ ಹೋದೆ.

ಇದ್ದ ಬದ್ದ ಎಲ್ಲಾ ಬ್ಯಾಂಕು ಗಳಿಂದ ಕಾರ್ಡುಗಳನ್ನು ಪಡೆದು ಸಾಲ ಮಾಡಿ ಒಂದು ಕಾರ್ಡನ್ನು ಸರಿದೂಗಿಸಲು ಮತ್ತೊಂದು ಕಾರ್ಡು ಅದನ್ನು ಸರಿದೂಗಿಸಲು ಮತ್ತೊಂದು ಕಾರ್ಡು ಹೀಗೆ ನನ್ನ ಜೀವನ ಎತ್ತಿನ ಗಾಡಿಯ ಎತ್ತುಗಳಂತೆ ಆಚೆ ಈಚೆ ಮಾಡುತ್ತಾ ಕಾಲ ದೂಕ ತೊಡಗಿದೆ, ಕಾರಣ ಇಲ್ಲಿ ಎಷ್ಟು ದುಡಿದರು ಸಾಲದಾಯ್ತು ಮೊದಲು ವಾರಕೊಮ್ಮೆ ತಂದೆ ತಾಯಿಯರಿಗೆ ಫೋನ್ ಮಾಡುತ್ತಿದ್ದವನು ಈಗ ೧೫ ದಿನಗಳಿಗೆ ಆಯಿತು. ಇದಕ್ಕೆಲ್ಲ ಕಾರಣ ನನಗೆ ಆದ ೨ ಮಕ್ಕಳು ಈ ರೀತಿ ಖರ್ಚು ಹೆಚ್ಚುತ್ತಾ ಹೋಯ್ತು ಅವರ ಸ್ಕೂಲು ಅವರ ಬಟ್ಟೆ ಊಟ ಖರ್ಚು ಒಂದೋ ಎರಡೋ, ಉಳಿತಾಯವಂತು ಇಲ್ಲ ಸಾಲ ಹೆಚ್ಚುತ್ತಾ ಹೋಯ್ತು. ಪ್ರತಿ ದಿನಾ ಊರಿಗೆ ಹೋಗುವುದರ ಬಗ್ಗೆ ಯೋಚಿಸುತ್ತಿದ್ದೆ ಅದು ಕನಸಾಗೆ ಉಳಿಯುತ್ತಿತ್ತು ಕಾರಣ ಹೆಚ್ಚಿದ ಜೀವನ ವೆಚ್ಹ, ಕೆಲಸದ ಅನಿಶ್ಚಿತತೆ. ಇದೆಲ್ಲವೂ ಸರಿದೂಗಿಸಿ ಒಮ್ಮೆ ಊರಿಗೆ ಹೋಗಬೇಕೆಂಬ ಆಸೆ ಹೀಗಿರುವಾಗಲೇ ಒಂದು ಮುಂಜಾನೆ ಊರಿಂದ ಫೋನ್ ಬಂತು ತಂದೆ ತಾಯಿಯರ ಮರಣ ವಾರ್ತೆ ಅದು ಹೇಳಲು ಸಾಧ್ಯವಿಲ್ಲದಂತಹ ಒಂದು ಮರಣ ವಾರ್ತೆ ಆದರೆ ನಾನು ಊರಿಗೆ ಹೋಗಲು ಸಾಧ್ಯವಾಗಲಿಲ್ಲ, ಅಂತ್ಯ ಕರ್ಮಗಳನ್ನೆಲ್ಲ ಅಕ್ಕ ಪಕ್ಕದವರು ಮಾಡಿ ಮುಗಿಸಿದರು.

ಹೀಗೆ ಸುಮಾರು ವರುಷಗಳು ಕಳೆದು ಹೋದವು ಇತ್ತೀಚಿಗೆ ಮಕ್ಕಳು ದೊಡ್ಡವರಾದಂತೆ ಅವರದೇ ಆದ ಪ್ರಪಂಚದಲ್ಲಿ ಅವರು ಮುಳುಗಿಹೋದರು ಇಲ್ಲಿಯ ವಾತವರಣದಲ್ಲಿ ಬೆಳೆದ ಈ ಮಕ್ಕಳು ಊರಿನ ಬಗ್ಗೆ ಕಿಂಚಿತ್ತು ಮಾತನಾಡುತ್ತಿರಲಿಲ್ಲ ಅವರು ಇಲ್ಲಿಗೆ ಒಗ್ಗಿ ಹೋಗಿದ್ದರು. ಆದರೆ ನನಗೆ ಏಕತಾನತೆ ಕಾಡ ತೊಡಗಿತು. ಈ ಮದ್ಯೆ ನಾನು ಸ್ವಲ್ಪ ಹಣ ಉಳಿಸತೊಡಗಿದ್ದೆ ಕಾರಣ ತಂದೆ ತಾಯಿಯರಿಗೆ ಆಗೀಗ ಅಂತ ಕಳಿಸುವ ಗೋಜು ಇರಲಿಲ್ಲ, ಅಲ್ಲದೆ ಮಕ್ಕಳು ಅವರು ದುಡಿದು ಅವರ ಖರ್ಚು ವೆಚ್ಚಗಳನ್ನು ಅವರೇ ಭರಿಸುವಂತೆ ಆಗಿದ್ದರು. ಹಾಗಾಗಿ ನಾನು ಒಂದು ತೀರ್ಮಾನಕ್ಕೆ ಬಂದು ಊರಲ್ಲಿ ಒಂದು ಮನೆ ಕೊಳ್ಳುವ ಎಂದು ನಿರ್ಧರಿಸಿದೆ ಹೇಗೂ ತಂದೆ ತಾಯಿಯರ ಸಿಂಗಲ್ ಬೆಡ್ರೂಮ್ ಫ್ಲಾಟ್ ಇದೆ ಅದನ್ನು ಮಾರಿ ಈ ಹಣವನ್ನು ಸೇರಿಸಿ ಒಂದು ದೊಡ್ಡ ಮನೆಯನ್ನು ಕೊಂಡು ಊರಲ್ಲಿ ಸ್ಥಿರವಾಗಿ ಇದ್ದು ಬಿಡೋಣ ಅಂತ ತೀರ್ಮಾನಿಸಿದೆ.

ಊರಿಗೆ ಬಂದು ನಾನು ಮನೆ ಹುಡುಕ ತೊಡಗಿದೆ ಆದರೆ ನನ್ನ ಊಹೆಗೆ ಯಾವುದು ನಿಲುಕದ ಹಾಗೆ ಬೆಲೆಗಳು ಆಕಾಶ ತಲುಪಿದ್ದವು. ಎಲ್ಲ ಸೇರಿ ನಾನು ಒಂದು ಸಾದಾರಣ ಬಡಾವಣೆಯಲ್ಲಿ ೨ ಬೆಡ್ ರೂಂ ಫ್ಲಾಟ್ ಕೊಳ್ಳಲು ಸರಿಯಾಯ್ತು ಆ ಸಮಾಧಾನದಲ್ಲಿ ಮನೆಗೆ ಬಂದು ಇಳಿದ ಮಾರನೆ ದಿನ ಮಕ್ಕಳು ಅಮೆರಿಕಾಗೆ ಹಿಂದಿರುಗಲು ತಯಾರಾದವು, ನಾನು ಎಷ್ಟು ಹೇಳಿದರು ಅವರು ಇಲ್ಲಿರಲು ಕೇಳಲಿಲ್ಲ ಅದಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ ಅವರೊಟ್ಟಿಗೆ ನನ್ನ ಹೆಂಡತಿಯೂ ಹೊರಟು ನಿಂತಳು.

ನಾನೀಗ ೨ ಬೆಡ್ರೂಮ್ ಫ್ಲಾಟ್ನಲ್ಲಿ ಒಬ್ಬನೇ ಇದ್ದೇನೆ ಆಗಾಗ ಪ್ರಾರ್ಥನಾ ಮಂದಿರಕ್ಕೆ ಹೋಗುತ್ತೇನೆ, ಕೆಲೊಮ್ಮೆ ಕಿಟಕಿಯ ಬಳಿ ಕುಳಿತು ಹೊರಗೆ ನೋಡುತ್ತೇನೆ ಬಿಳಿ ಶುಬ್ರ ಆಕಾಶ ನನ್ನಿಂದ ದೂರ ಕಾಣುತ್ತದೆ, ಪಕ್ಷಿಗಳು ಸಹ ದೂರ ಹಾರುತ್ತಿರುತ್ತವೆ, ಮಳೆ ಬಂದರು ಸಹ ಅದು ತಿಳಿಯಂದಂತೆ ನಾನು ಮಲಗಿದ್ದಾಗ ಬಂದು ಹೋಗಿರುತ್ತದೆ. ನಕ್ಷತ್ರಗಳು ಕಾಣುವುದಿಲ್ಲ ಚಂದಿರನು ಸಹ ಕಾಣ ಅಕ್ಕ ಪಕ್ಕದಲ್ಲೆಲ್ಲ ದೊಡ್ಡ ದೊಡ್ಡ ಕಟ್ಟಡಗಳು ನಾನು ಮಾತ್ರ ಕಿಟಕಿಯ ಒಳಗೆ ಒಬ್ಬನೇ ದೂರದಲ್ಲಿ ಮಕ್ಕಳು ಆಡುವುದನ್ನು ನೋಡುತ್ತೇನೆ, ಮದ್ಯೆ ಮದ್ಯೆ ಕಟ್ಟಡಗಳ ನಡುವೆ ಕೇಬಲ್ ಟಿ ವಿ ವೈಯರುಗಳು ಜೋತುಬಿದ್ದಿವೆ. ಅದರಲ್ಲಿ ಕೆಲೊಮ್ಮೆ ಹಾರಿ ಹಾರಿ ಸೋತು ಸುಸ್ತಾದ ಕೆಲವು ಪಕ್ಷಿಗಳು ಬಂದು ಅಲ್ಲಿ ಕೂರುತ್ತವೆ ನನ್ನಂತೆ, ಆದರೆ ಮರು ಕ್ಷಣದಲ್ಲೇ ಮತ್ತೆ ಮೇಲಕ್ಕೆ ಹಾರುತ್ತವೆ ಆದರೆ ನಾನು ಮಾತ್ರ ಇಲ್ಲೇ ಕುಳಿತಿರುತ್ತೇನೆ.

ನನ್ನ ಮಕ್ಕಳು ಅಮೆರಿಕಾದಲ್ಲಿ ನನ್ನವಳು ಅಷ್ಟೆ. ಅಪರೂಪಕ್ಕೊಮೆ ನಾನೇ ಅವ್ರಿಗೆ ಫೋನು ಮಾಡುತ್ತೇನೆ ಕಾರಣ ಅವ್ರು ಕೆಲಸದಲ್ಲಿ ಬ್ಯುಸಿ ಇರುತ್ತಾರೆ. ಇತ್ತೀಚಿಗೆ ನನ್ನ ಆರೋಗ್ಯ ಸರಿಯಿಲ್ಲ ಆದರು ನಾನು ನನ್ನ ಊರಿನಲ್ಲಿದ್ದೇನೆ ಎಂಬ ಸಮಾಧಾನ ನನಗೆ, ಕಾರಣ ನಾನು ಸತ್ತರೆ ನನ್ನ ಅಕ್ಕ ಪಕ್ಕದವರು ನನ್ನ ಅಂತ್ಯ ಸಂಸ್ಕಾರ ಮಾಡುತ್ತಾರೆ, ನನ್ನ ತಂದೆ ತಾಯಿಯವರಿಗೆ ಸಹ ಹೀಗೆ ಆದದ್ದು. ಈಗ ನನಗೆ ವಯಸ್ಸು ೬೦ ನನ್ನ ತರಹದ ಸ್ನೇಹಿತರು ಯಾರಾದರು ಸಿಗುತ್ತಾರ ಎಂದು ದಿನವು ಹುಡುಕುತ್ತೇನೆ.

ಇಷ್ಟೆಲ್ಲಾ ಆಗಿ ನನಗೆ ಅರ್ಥ ಆಗದ ಒಂದು ವಿಷ್ಯ ನನ್ನ ತಂದೆ ಅಮೆರಿಕಾಗೆ ಹೋಗಲಿಲ್ಲ ಆದರು ಅವರಿಗೆ ಸಿಂಗಲ್ ಬೆಡ್ರೂಮ್ ಫ್ಲಾಟ್ ಇತ್ತು. ಆದರೆ ನನಗೆ ಡಬ್ಬಲ್ ಬೆಡ್ರೂಮ್ ಫ್ಲಾಟ್ ಇದೆ, ಅದೊಂದು ಸಮಾಧಾನ.

ಹಾಗಾದರೆ ನಾನು ಇಷ್ಟೆಲ್ಲಾ ಮಾಡಿದ್ದು ಒಂದು ಬೆಡ್ರೂಮ್ ಹೆಚ್ಚು ಪಡೆಯಲು ಅಲ್ವ,,,?

ಹೌದ ಏನೋ ಗೊತ್ತಿಲ್ಲ ?

ನನ್ನ ಲೆಕ್ಕಾಚಾರಗಳು , ನನ್ನ ಉಳಿತಾಯ ಸ್ಕೀಮುಗಳು , ನನ್ನ ಬ್ಯಾಂಕ್ ಕಾರ್ಡುಗಳು , ಹಾಗಾದರೆ ನಾನು ಜೀವಿಸಿದ್ದು ಜೀವನಕ್ಕಾಗಿಯೋ ಅಥವಾ ಜೀವನಕ್ಕಾಗಿ ನಾನೋ ,?

(೬೦ ವರ್ಷದ ವ್ಯಕ್ತಿ ತನ್ನ ಜೀವನದ ಕಥೆಯನ್ನು ಈ ರೀತಿ ಬರೆದದ್ದು - ಅನುಭವ ಕಥನ )