Monday, 31 August 2009

ನಮಗೆ ಇಷ್ಟು ಸ್ವಾತಂತ್ಯ್ರ ಸಾಕ ಅಥವಾ ಇನ್ನು ಬೇಕಾ


ನಮಗೆ ಇಷ್ಟು ಸ್ವಾತಂತ್ಯ್ರ ಸಾಕ ಅಥವಾ ಇನ್ನು ಬೇಕಾ ?
ಹೌದು ನಾವು ಬಸ್ಸಿನ ಮೇಲೆ ಕೂರುತ್ತೇವೆ, ಟ್ರೈನ್ ಮೇಲೆ ಕೂರುತ್ತೇವೆ, ಸೈಕಲ್ನಲ್ಲಿ ೩ ಜನ ಕೂರುತ್ತೇವೆ, ಯಾವಾಗ ಎಲ್ಲಿ ಬೇಕಾದರೂ ಗಲಬೆಗಳನ್ನು ಮಾಡುತ್ತವೆ, ಕಿಟಕಿ ಗಾಜುಗಳನ್ನು ಒಡೆಯುತ್ತೇವೆ, ವಾಹನಗಳನ್ನು ನಾಶಮಾಡುತ್ತೇವೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತೇವೆ, ಧರ್ಮ ಧರ್ಮದ ವಿರುದ್ದ ಹೋರಾಡುತ್ತೇವೆ , ಒಂದಿಂಚು ಜಾಗಕ್ಕಾಗಿ ಕೊಲೆ ಮಾಡುತ್ತೇವೆ , ಲಂಚ ಸ್ವೀಕರಿಸುತ್ತೇವೆ ಲಂಚ ಕೊಡುತ್ತೇವೆ, ಅಪಹರಣಗಳನ್ನು ಮಾಡುತ್ತೇವೆ , ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಡ್ಡಿಗಳನ್ನು ಹಾಕುತ್ತೇವೆ, ಸಾಕಷ್ಟು ಅಹಿತಕರ ಘಟನೆಗಳನ್ನು ನಾವೇ ಮಾಡುತ್ತೇವೆ ಆದರು ,,,,
ನಮಗೆ ಸ್ವಾತಂತ್ಯ್ರ ಸಿಕ್ಕಿಲ್ಲ ,,,?
ಹೌದ ,,,,,!
" ಚಿಂತನೆ "
ಚಿತ್ರ (Daiji/W)

Saturday, 29 August 2009

ಎಲ್ಲವು ತಮ್ಮ ಸುರಕ್ಷತೆಗಾಗಿ


ಇದು ನನಗೆ ಬಂದ ಇ-ಮೇಲ್ :
ಎಲ್ಲವು ತಮ್ಮ ಸುರಕ್ಷತೆಗಾಗಿ,
ಯಾವುದು ತಪ್ಪು ಯಾವುದು ಸರಿ,
ಕೆಲವೊಮ್ಮೆ ತಮಾಶೆಯಾಗಿ ಕಂಡದ್ದು,
ಕೆಲವೊಮ್ಮೆ ಅವಶ್ಯಕತೆಯಾಗಿ ಕಾಣಬಹುದು,

Thursday, 27 August 2009

ಒಂದು ಪ್ರೇಮ ಪತ್ರ

ಹೇ ಗೆಳತಿ ನನ್ನನು ಮರೆಯಲು ಪ್ರಯತ್ನಿಸಬೇಡ ನೀ ಪ್ರಯತ್ನಿಸಿದಷ್ಟು ಹೆಚ್ಚು ನಾ ನಿನ್ನ ನೆನಪಾಗಿ ಕಾಡುವೆ, ದೀಪವಾರಿಸಬೇಡ ಕತ್ತಲಾಗಿ ನಾ ಕಾಡುವೆ, ಮುಂಜಾನೆ ಎದ್ದೊದ್ದೊಡನೆ ನನ್ನನ್ನು ಮರೆಯುವುದಕ್ಕಾಗಿ ಬಾಗಿಲು ತೆರೆಯಬೇಡ ಮೊದಲ ಸೂರ್ಯ ರಶ್ಮಿಯಾಗಿ ನಿನ್ನ ನಗು ಮುಖದ ಮೇಲೆ ನಾ ಕಾಣುವೆ, ನನ್ನನು ಮರೆಯುವುದಕ್ಕಾಗಿ ಗೆಳತಿಯರೊಂದಿಗೆ ಮಾತಿನಲ್ಲಿ ತೊಡಗಬೇಡ ಮಾತುಗಳ ಸಂವಹನವಾಗಿ ನಾ ಕಾಡುವೆ, ನನ್ನ ಮರೆಯಲು ಸಂಗೀತ ಕೇಳಿದರೆ ನಾ ತರಂಗಗಳಾಗಿ ಕಾಡುವೆ, ನೀರಿನಲ್ಲಿ ಮೀಯಲು ಹೋದೆಯ ಅಲೆಗಳಾಗಿ ಕಾಡುವೆ,

ನನ್ನ ಮರೆಯಲು ಪುಸ್ತಕ ಓದುತ್ತೀಯ ನಾನು ನವಿಲುಗರಿಯಾಗಿ ಕಾಣುವೆ, ಕನಸು ಕಾಣಬೇಡ ವಾಸ್ತವವಾಗಿ ನಾ ಬರುವೆ, ಬೇಸರದಲ್ಲಿದ್ದಿಯ ಮುಗುಳ್ನಗೆಯಾಗಿ ನಾ ಬರುವೆ, ಅಳಬೇಡ ನಾ ಕಣ್ಣೀರಾಗಿ ಬರುವೆ, ಮತ್ತೇಕೆ ಪ್ರಯತ್ನಿಸುತ್ತಿಯ ನನ್ನ ಮರೆಯಲು ನಾ ನಿನ್ನ ಪ್ರಯತ್ನವಾಗಿ ಬರುವೆ, ನನಗಾಗಿ ಕೊಡಲು ನಿನ್ನಲಿ ಸ್ವಲ್ಪ ಪ್ರೀತಿ ಇಲ್ಲವೇ ನಿನ್ನಲ್ಲಿರುವ ಅಸಹನೆಯೇ ಸರಿ ಅದನೆ ನಾ ಪ್ರೀತಿ ಎಂದು ತಿಳಿಯುವೆ, ನಿನ್ನ ಒಂದು ಮುಗುಳ್ನಗುವಿಗಾಗಿ ನಾ ಕಾದಿರುವೆ ಆ ಕನ್ನಡಿಯಾಗಿ ನಿನ್ನ ಮನೆಯಲಿ , ಅದನೊಮ್ಮೆ ನೋಡಿ ನಕ್ಕು ಬಿಡು ಕಾರಣ ಇಷ್ಟೊಂದು ದಿನದಿಂದ ಗೋಡೆಯಲ್ಲಿ ಅಂಟಿ ಕಾದಿರುವ ನನಗೆ ಮೊಳೆ ಇಲ್ಲದ ಅನುಭವವೇ ಆಗದಿರಲಿ ನನ್ನನು ಈ ರೀತಿ ಹಿಂಸಿಸಿ ಕೊಲ್ಲಬೇಡ ಕಾರಣ ನಾನು ಮೊದಲೇ ಸತ್ತು ಹೋಗಿದ್ದೇನೆ,

ನೀನು ಇಚ್ಚಿಸಿದರೆ ನಿನಗೆ ನನಗಿಂತ ಒಳ್ಳ್ಯೆಯ ಸ್ಪುರದ್ರೂಪಿ ಬುದ್ದಿವಂತ ಹುಡುಗ ಸಿಗಬಹುದು, ಆದರೆ ನನ್ನಂತ ಪ್ರೀತಿಸುವ ಹುಚ್ಹ ಸಿಗಲಾರ, ಮನಸ್ಸಿನಲ್ಲಿ ಕನಸುಗಳಿವೆ ಕನಸುಗಳಲ್ಲಿ ಭಾವನೆಗಳಿವೆ ಅದರಲ್ಲೂ ಆಸೆಗಳಿವೆ ಅದರಲ್ಲೂ ಒಂದು ಸಾನಿದ್ಯವಿದೆ ಅವೆಲ್ಲವೂ ನಿನ್ನನ್ನೇ ಬಯಸಿವೆ ಈಗಲಾದರೂ ಹೇಳು ನೀ ನನ್ನನ್ನು ಮರೆಯಲು ಪ್ರಯತ್ನಿಸುವೆಯ.

Monday, 24 August 2009

ನಿನ್ನ ವೈಯಾರಾ ,,,,,

ನಿನ್ನ ಹೊಳಪು
ನಿನ್ನ ತಳುಕು , ನಿನ್ನ ಬಿಳುಪು
ನಿನ್ನ ಆಟ , ನಿನ್ನ ಮೈಮಾಟ ನಿನ್ನ ಓಡಾಟ
ನಿನ್ನ ಕಾಂತಿ , ನಿನ್ನ ಶಾಂತಿ
ನಿನ್ನ ವೈಯಾರಾ ,,,,,,,,
ಇದೆಲ್ಲವೂ ಸೇರಿ ಕಾಣದಾಯ್ತು ನನ್ನ ಕೈಗಡಿಯಾರ
ಕಾರಣ ಅದರಿಂದಲೇ ನಾನು ತಂದೆ ನಿನಗೆ
ಉಡುಗೊರೆಯ ಹಾರ .

Saturday, 22 August 2009

ವೈರಸ್ ಮತ್ತು ಆಂಟಿ ವೈರಸ್

ಇಂಟರ್ನೆಟ್ ಮೂಲಕ ಪರಿಚಯವಾಯ್ತು,
ಇಂಟರ್ನೆಟ್ ಮೂಲಕ ಏನ್ಗೇಜ್ಮೆಂಟ್ ಆಯ್ತು,
ಇಂಟರ್ನೆಟ್ ಮೂಲಕ ಮದುವೆಯಾಯ್ತು,
ಇಂಟರ್ನೆಟ್ ಮೂಲಕ ಹನಿಮೂನ್ ಆಯ್ತು,
ಈಗ ೨ ಮಕ್ಕಳಿದ್ದಾರೆ
೧. ವೈರಸ್
೨. ಆಂಟಿ ವೈರಸ್

Thursday, 20 August 2009

ಗೊತ್ತಿದ್ದರೆ ಹೇಳ್ಬೇಕು ಇಲ್ಲದಿದ್ದರೆ ಸುಮ್ನೆ ಕೂರಬೇಕು

ಇಂದು ಬೆಳಗ್ಗೆ ನನ್ನ ಆಫೀಸಿನ ಹತ್ತಿರ ಒಬ್ಬ ವ್ಯಕ್ತಿ please can you tell me were is B H S ಎಂದು ಕೇಳಿದ ನಾನಂದೆ ನೆಕ್ಸ್ಟ್ ಸಿಗ್ನಲ್ ಲೆಫ್ಟ್ o k saar thanku ಎಂದ ವ್ಯಕ್ತಿ ಎ ಇಲ್ಲೇ ಹತ್ತ್ರ ಕಣೋ ಎಂದು ಆ ವ್ಯಕ್ತಿ ಇನ್ನೊಬ್ಬನಿಗೆ ಕನ್ನಡದಲ್ಲಿ ಹೇಳಿದ. ತಕ್ಷಣ ನಾನು ಓ ಕನ್ನಡಾನ ಅಂದೇ, ಓ ಹೌದು ಸಾರ್ ಎಂದು ಸ್ವಲ್ಪ ಕುಶಲೋಪರಿ ಯಾಯ್ತು. ೩ ಜನರಿಗೂ ಕುಶಿಯಾಯಿತು ಮತ್ತೆ ತಮ್ಮ ತಮ್ಮ ಕೆಲಸಗಳಿಗೆ ಹೊರಟೆವು.

ನನಗೆ ಮಾತ್ರ ಒಂದು ಡೈಲಾಗ್ ನೆನೆಪಾಯ್ತು " ಗೊತ್ತಿದ್ರೆ ಹೇಳ್ಬೇಕು ಇಲ್ಲದಿದ್ದರೆ ಸುಮ್ನೆ ಕೂರಬೇಕು " ಇದು ಅಂದು ಪರೇಶ ನನಗೆ ಹೇಳಿದ್ದು. ಒಂದು ದಿನ ಬೆಳಗ್ಗೆ ಒಬ್ಬರು ಯಜಮಾನರೊಂದಿಗೆ ಸೈಕಲ್ ಶಾಪ್ ಬಾಬು ನಮ್ಮ ಮನೆಯ ಹತ್ತಿರ ಬಂದ ಬಂದವನೇ ಸಾರ್ ಇವರು ತುಮಕೂರಿಂದ ಬಂದಿದ್ದಾರೆ ಇಲ್ಲಿ ಯಾರೋ ಲೆಕ್ಚರ್ ಹೊಸದಾಗಿ ಬಂದಿದಾರಂತಲ್ಲ ಅವರ ತಂದೆ ಇವರು, ಆ ಮನೆ ಗೊತ್ತಿಲ್ಲ ಇವ್ರಿಗೆ ಸ್ವಲ್ಪ ಹೇಳಿದ್ರೆ ಕರ್ಕೊಂಡು ಹೋಗ್ ಬಿಡ್ತಿದ್ದೆ ಅಂದ .

ಓ ಆ ಲೆಕ್ಚರ್ ಮನೆ ಅಲ್ವೇನೋ ಗೊತ್ತು ಬಿಡೋ ಈ ರೋಡಲ್ಲಿ ನೇರ ಹೋದ್ರೆ ಒಂದು ದೇವಸ್ಥಾನ ಐತಲ್ಲ ಗೊತ್ತ ? ಅದೆಲ್ ಸಾರ್ ದೇವಸ್ಥಾನ , ಹೋಗ್ಲಿ ನೇರ ಬಲಗಡೆ ಹೋದ್ರೆ ಮಸಿದಿ ಐತಲ್ಲ ಗೊತ್ತ ? ಅದೆಲ್ ಸಾರ್, ಹೋಗ್ಲಿ ಪ್ರೈಮರಿ ಸ್ಕೂಲ್ ಗೊತ್ತ ? ಸ್ಕೂಲ ಅದೆಲ್ ಸಾರ್ . ಏನು ಬೇಡ ನ್ಯೂಸ್ ಪೇಪರ್ ಬುಕ್ ಎಲ್ಲಾ ಮಾರೋ ಅಂಗ್ಡಿ ಐತಲ್ಲ ಗೊತ್ತ, ನಂ ಏರಿಯದಲ್ಲಿ ಬುಕ್ ಅಂಗ್ಡಿ ಐತಾ ಅದೆಲ್ ಸಾರ್, ಯಾಕ್ ಇರಬಾರದ ಎಂದು ಸಿಟ್ಟಿನಲ್ಲಿ ನಾನು ಕೇಳಿದೆ ನಿಂಗ ಈ ಏರಿಯದಲ್ಲಿ ಬೇರೆ ಏನಾದ್ರೂ ಗೊತ್ತೈತ ಅಂದೇ, ನೀವ್ಯಾಕ್ ಸಿಟ್ಟ ಆಗ್ತೀರ ಸಾರ್ ಅಂದ. ಅಷ್ಟರಲ್ಲಿ ಪರೆಶನ ತಾಯಿ ನೀರು ತುಂಬುತ್ತಿದ್ದವರು ತಡಿಯಪ್ಪ ಪರೆಶನ್ಗೆ ಕೇಳಾಣ ಅಂದು ಪರೆಶನಿಗೆ ಕರೆದರು.

ಪರೇಶ ಬಂದವನೇ ಏನೋ ಹಲ್ಕಾ ನನ್ಮಗನೇ ಬೆಳಗ್ಗೆನೇ ಯಾರ್ಗೋ ಕರ್ಕೊಂಡು ಬಂದಿದಿಯ ಏನ್ ಬೇಕಾಗಿತ್ತೋ ಅಂದ. ಇಲ್ಲ ಕಣೋ ಇವರು ತುಮಕೂರಿಂದ ಬಂದಿದ್ದಾರೆ ಇವ್ರ ಮಗ ಲೆಕ್ಚರ್ ಇಲ್ಲಿ ಹೊಸದಾಗಿ ಬಂದಿದಾರಂತೆ ಅವ್ರ ಮನೆ ಬೇಕಂತೆ. ಅದಕ್ಕೆ ಪರೇಶ ಏನ್ಸಾರ್ ಅವ್ರು ನಿಮ್ ಫ್ರೆಂಡ್ ಅಲ್ವ ನಿಮಿಗ್ ಗೊತ್ತಲ್ಲ ಅವ್ರ ಮನೆ ಹೇಳಾಕ್ ಆಗ್ಲಿಲ್ವಾ ಅಂದ . ಅಲ್ಲ ಕಣೋ ಪರೇಶ ಇವ್ನಿಗೆ ಹೆಂಗ್ ಹೇಳುದ್ರು ಅರ್ಥ ಆಗ್ತಿಲ್ಲ ಅಂದೇ. ಓ ಹೋ ಹಂಗ ,,

ಬಾಬು ಬಾರೋ ಇಲ್ಲಿ ಇಸ್ಪೀಟ್ ಕ್ಲಬ್ ಗೊತ್ತೇನೋ ? ಹ್ಞೂ ಗೊತ್ತು , ಅದರಿಂದ ಮುಂದೆ ಹೋದ್ರೆ ಬಲಗಡೆ ಮಟ್ಕಾ(ಓ ಸಿ) ನಾಗನ ಅಂಗ್ಡಿ ಗೊತ್ತೇನೋ ಹ್ಞೂ ಗೊತ್ತು , ಸ್ವಲ್ಪ ಮುಂದೆ ಹೋಗಿ ಅಲ್ಲಿಂದ ಎಡಗಡೆ ಹೋದ್ರೆ ಶರಾಬ್ ಅಂಗ್ಡಿ ಗೊತ್ತೇನೋ ಹ್ಞೂ ಗೊತ್ತು , ಅದರ ಎದುರುಗಡೆ ಫೀಲ್ಡಲ್ಲಿ ಒಂದು ಬೋರ್ವೆಲ್ ಐತೆ ಬರಿ ಹುಡುಗಿಯರೇ ನೀರ್ ತುಂಬ್ತಾ ಇರ್ತಾರ್ ನೋಡೋ ಹ್ಞೂ ಹ್ಞೂ ಹೇಳು, ಅಲ್ಲಿ ನಿಂತು ನೋಡುದ್ರೆ ಹೊಸ ಬಿಲ್ಡಿಂಗ್ ಕಾಣ್ತೀತ್ ನೋಡು ಅದೇ ನಂ ಹೊಸ ಲೆಕ್ಚರ್ ಮನೆ. ಓ ಗೊತ್ತಾಯ್ತು ಬಿಡಪ್ಪ.

ಇಷ್ಟು ಹೇಳಾಕ್ಕೆ ಒಂದು ಗಂಟೆಯಿಂದ ಇವ್ರು ದೇವಸ್ಥಾನ - ಮಸೀದಿ - ಬುಕ್ ಅಂಗ್ಡಿ - ಸ್ಕೂಲು ಒಳ್ಳೆ ಕಥೆ ಆಯ್ತು ಎ ಬರ್ರಿ ಯಜಮಾನ್ರೆ ಅಂತ ಬಾಬು ಹೊರಟ.
ಕೂಡಲೇ ಪರೇಶ ಯಾರಿಗೆ ಹೆಂಗ್ ಅಡ್ದ್ರೆಸ್ ಹೇಳ್ಬೇಕು ಅನ್ನೋದು ಒಂದು ಕಲೆ. ಅದು ಬಿಟ್ಟು ಸುಮ್ಮನೆ ಜನ ಅದೇನೋ ಹೇಳ್ತಾರಲ್ಲ ಹಂಗೆ. " ಸುಮ್ಮನೆ ಇರಲಾರದೆ ಇರುವೆ ಬಿಟ್ಕೊಂದ್ರು ಅಂತ "

Tuesday, 18 August 2009

ಮಹಾನಗರಪಾಲಿಕೆ ಶಿವಮೊಗ್ಗ


ಇದು ನನ್ನ ಸುಂದರ ಶಿವಮೊಗ್ಗದ ಅತಿ ಸುಂದರವಾದ ಮಹಾನಗರಪಾಲಿಕೆ
ಒಂದು ಕಡೆ ಮಹಾತ್ಮ ಗಾಂಧೀ ಉದ್ಯಾನವನ, ಒಂದು ಕಡೆ ಕರ್ನಾಟಕ ಸಂಘ ಭವನ, ಒಂದು ಕಡೆ ವೀರಶೈವ ಕಲ್ಯಾಣ ಮಂದಿರ , ಎದುರಿಗೆ ಬಿ ಹೆಚ್ ರಸ್ತೆ , ಮತ್ತೊಂದು ಕಡೆ ಡಿ ವಿ ಎಸ್ ಶಾಲೆಗೆ ದಾರಿ , ಇನ್ನೊಂದು ಕಡೆ ಕಮಲ ನೆಹರು ಕಾಲೇಜಿಗೆ ದಾರಿ ಎಲ್ಲದರ ಮದ್ಯದಲ್ಲಿ ಈ ಸುಂದರ ಭವನ.

Saturday, 15 August 2009

ಬೇಡಾಕಣೇ ,,,,,,,,ಎ ,,,,, ಬೇಡ ಅಂದ್ರೆ ಬೇಡ

ವಾರದಲ್ಲಿ ಒಂದು ದಿನ ರಜಾ ಅದನ್ನು ಸಹ ಸರಿಯಾಗಿ ಅನುಭವಿಸಲು ನನ್ನವಳು ನನಗೆ ಬಿಡುವುದಿಲ್ಲ, ಬೆಳಗ್ಗೆ ಬೇಗ ಎದ್ದು T V ಯನ್ನು ಜೋರಾಗಿ ಹಾಕಿ ನನ್ನ ನಿದ್ದೆಯನ್ನೆಲ್ಲ ಹಾಳು ಮಾಡಿ ೧೦ ಗಂಟೆಗೆ ಏಳುವವನನ್ನು ಕನಿಷ್ಠ ಪಕ್ಕ್ಷ ೮ ಗಂಟೆಗೆ ಏಳುವಂತೆ ಮಾಡಿ ಅಯ್ಯೋ ಯಾಕ್ರೀ ಬೇಗ ಎದ್ದು ಬಿಟ್ರಿ ಇವತ್ತು ರಜಾ ಅಲ್ವ ,!

ಅಯ್ಯೋ ಈ ಮಕ್ಕಳಂತೂ ನಿಮಗೆ ಮಲಗಕ್ಕೆ ಬಿಡೋಲ್ಲ ಛೆ. ಹೇಗೂ ಎದ್ದಿದ್ದೀರಲ್ಲ ಬೇಗ ಫ್ರೆಶ್ ಆಗಿ, ನಾನು ತಿಂಡಿನು - ಟೀ ನು ತರ್ತೀನಿ, ಅಂತ ಅಡುಗೆ ಕೊಣೆಗೆ ಹೋಗುತ್ತಾ ರೀ ಏನೂಂದ್ರೆ ಸ್ವಲ್ಪ ವ್ಯಾಕುಂ ಹಾಕ್ಬಿಡ್ರಿ ಅಷ್ಟೊತ್ತಿಗೆ ನಿಮ್ಮ ತಿಂಡಿನೂ ರೆಡಿ ಯಾಗುತ್ತೆ ,, ? ಅಂದ ಹಾಗೆ ಮಕ್ಕಳು ಹೇಳ್ತಿದ್ರು ಇವತ್ತು ಸಂಜೆ ಹೊರಗೆ ಊಟ ಅಂತೆ ಬಾಳ ಖುಷಿಯಲ್ಲಿದ್ದಾರೆ. ಇದು ಪ್ರತಿ ಶುಕ್ರವಾರ ಅಂದರೆ ಇಲ್ಲಿನ ರಜಾ ದಿನದ ನನ್ನವಳು ನನ್ನಮೇಲೆ ತೋರಿಸುವ ಪ್ರೀತಿ.

ಅದು ಕೆಲಒಮ್ಮೆ ಇದ್ದಕ್ಕಿದ್ದಂತೆ ಬದಲಾಗುವುದುಂಟು ಅಂದರೆ ಅದು ಹೀಗೆ, ರಜಾ ದಿನ ಹತ್ತು ಗಂಟೆಯಾದರೂ ನನನ್ನು ಕರೆಯದೆ ನಾನು ನಿಧಾನವಾಗಿ ಎದ್ದರು ಯಾಕ್ರೀ ಬೇಗ ಎದ್ದ್ರಿ ಅಂತ ಹೇಳಿ ತಿಂಡಿ ರೆಡಿ ಇದೇರಿ, ಬೇಗ ಫ್ರೆಶ್ ಆಗ್ರಿ ಅಂತ ಹೇಳಿ ನನ್ನ ಬಟ್ಟೆ ಇಸ್ತ್ರಿ ಮಾಡಿ ರೆಡಿ ಇಟ್ಟಿರುತ್ತಾಳೆ. ರೀ ಇವತ್ತು ಹೊರಗೆ ಹೋಗೋದು ಬೇಡವಂತೆ ಅದಕ್ಕೆ ನಾನು ನಿಮ್ಮ ಇಷ್ಟದ ಅಡಿಗೆ ಮಾಡ್ತಿದೀನಿ ಅಲ್ಲಿ ತನಕ ನೀವು ಮಕ್ಕಳೊಂದಿಗೆ ಟಿ ವಿ ನೋಡ್ತಾ ಇರೀ.

ಅದಾಗಲೇ ನನಗೆ ಭಯ ಶುರುವಾಗಿರುತ್ತದೆ ಕಾರಣ ವಿಷ್ಟೇ ಇವಳಿಗೆ ಮಾಡಿಕೊಟ್ಟಿರುವ ಶಾಪಿಂಗ್ ಕ್ರೆಡಿಟ್ ಕಾರ್ಡ್ ಬಿಲ್ ಬಂದಿದೆಯಂದು ನನಗೆ ತಿಳಿದು ಅದು ನೋಡುವ ಧರ್ಯವಿಲ್ಲದೆ, ನನ್ನ ತಿಂಡಿ ಊಟ ಎಲ್ಲ ಮುಗಿದ ಮೇಲೆ ನೋಡೋಣ ವೆಂದು ಸಮಾಧಾನ ಪಟ್ಟುಕೊಳ್ಳುತ್ತಾ , ನನಗೆ ನಾನೇ ಸಮಾಧಾನ ಹೇಳುತ್ತಾ ಧೈರ್ಯ ಗೊಳ್ಳುತ್ತಾ ನೀರು ಕುಡಿಯುವ ಲೋಟ ಹಿಡಿದು ಆ ಬಿಲ್ ಎಲ್ಲಿದೆ ಅಂತ ಕೇಳಿದ ಕೂಡಲೇ , ಯಾವ ಬಿಲ್ಲು ? ಓ ಅದಾ ಅಲ್ಲೇ ಟೇಬಲ್ ಮೇಲೆ ಇದೆಯಲ್ಲ,

ರೀ ಏನೂಂದ್ರೆ ಒಂದ್ನಿಮಿಷ ಎದ್ರುಮನೆ ಆಂಟಿ ಏನೋ ಕರೀತಿದಾರೆ, ಅಂತ ಹೋದರೆ ಇವಳು ಮತ್ತೆ ಬರುವುದು ಸಂಜೆ ೫ ಗಂಟೆಗೆ. ಬಂದವಳೇ ನೇರ ಅಡುಗೆ ಕೊಣೆಗೆ ಹೋಗಿ ಪಕೋಡ ಅಥವಾ ಕೇಸರಿಬಾತ್ ಮತ್ತು ಕಾಫಿ ಹಿಡಿದು ಕೊಂಡು ಪ್ರೀತಿಯಿಂದ ಬಂದು ರೀ ಏನೂಂದ್ರೆ ,, ಏನ್ರಿ ದಿನದಿಂದ ದಿನಕ್ಕೆ ವಸ್ತುಗಳ ಬೆಲೆ ಜಾಸ್ತಿನೆ ಆಗ್ತಿದೆ ಜೀವನ ಮಾಡೋದೇ ಕಷ್ಟ ಇಲ್ಲೇ ಹೀಗಾದ್ರೆ ಅಲ್ಲಿ ಹೆಂಗ್ರಿ . ಪಾಪ ಆಂಟಿ ಅದೇ ವಿಷ್ಯ ಹೇಳ್ತಾ ಇದ್ರು ಬಾಳ ಕಷ್ಟ ನಾನು ಅವ್ರಿಗೆ ಹೇಳ್ದೆ ನಾನಂತೂ ಬಾಳ ಕಂಟ್ರೋಲ್ ನಲ್ಲಿ ಖರ್ಚು ಮಾಡೋದು ಅಂತ ಅದಕೆ ಅವ್ರು ನೀನು ಬಿಡಮ್ಮ ಬಾಳ ಬುದ್ದಿವಂತೆ ಅಂತ ಹೇಳುದ್ರು .

ಅಲ್ವೇನ್ರಿ ಎಲ್ಲರು ನನ್ನ ಹಾಗೆ ಬುದ್ದಿವಂತರಿರುತ್ತಾರ ನೀವೇ ಹೇಳ್ರಿ . ಅಯ್ಯೋ ನಾನ್ ಮರ್ತೆ ಹೋದೆ ನಾನು ಮೊನ್ನೆ ನಿಮ್ಮ ಇಷ್ಟದ ಟೈ ತನ್ದಿದೀನ್ರಿ ಈ ಕಲರ್ ನಿಮಗೆ ತುಂಬ ಇಷ್ಟ ಅಲ್ವ. ಮಕ್ಕಳು ಹೇಳುದ್ರು ನಿಮಗೆ ತುಂಬ ಚೆನಾಗ್ ಕಾಣತ್ತೆ ಅಂತ .
ನಂಗೆ ಇದೆಲ್ಲ ನೋಡಿ ಒಮ್ಮೆಲೇ ಕೂಗಿ ಬೇಡ ಕಣೇ ಅಂತ ಹೇಳ ಬೇಕೆನಿಸಿದರು ಆ ಧೈರ್ಯವಿಲ್ಲದೆ ನಿಧಾನವಾಗಿ ಇದೆಲ್ಲ ಯಾಕೆ ನನ್ನ ಬಳಿ ತುಂಬ ಇದೆಯಲ್ಲ ಎಂದು ಹೇಳುತ್ತಾ ಅವಳ ಕಡೆ ನೋಡಿದರೆ ಹ್ಞೂ ,,, ನೀವು ಯಾವಾಗಲು ಅಷ್ಟೆ ಅದೇ ನಿಮ್ಮ ಫ್ರೆಂಡ್ ಸುರೇಶನ ಹಾಗೆ ಬೇಡಾ ಕಣೇ ,,,,,,ಎ ,,,,,, ಎ ಅನ್ನೋ ಒಂದೇ ರಾಗ .

ಹೌದು ಸುರೇಶ ಅವನು ಬಾಲ್ಯದ ಗೆಳೆಯ ಅಂದರೆ ನಾನು ಪ್ರೈಮರಿ ಸ್ಕೂಲ್ ಹೋಗುತಿದ್ದಾಗ ಒಟ್ಟಿಗೆ ಸ್ಕೂಲ್ ಹೋಗೂದು ಅಂದರೆ ನಾನು ಬೇಗ ರೆಡಿ ಯಾಗಿ ಸುರೇಶನ ಮನೆಗೆ ಹೋಗುತ್ತಿದ್ದೆ. ಅಲ್ಲಿಂದ ನಾನು ಅವನು ಒಟ್ಟಿಗೆ ಹಗ್ಗದ ಬಸ್ಸು ಸೇರಿ ಒಬ್ಬ ಡ್ರೈವರ್ ಆದರೆ ಒಬ್ಬ ಕಂಡಕ್ಟರ್ ಬಾಯಲ್ಲೇ ಶಬ್ದ ಮಾಡುತ್ತಾ ಕೈಯಲ್ಲಿ ಗೇರ್ ಬದಲಿಸುವ ಆಕ್ಷನ್ ಮಾಡುತ್ತಾ ಷ್ಟೇರಿಂಗು (ಚಾಲಕ ಚಕ್ರ ) ತಿರುಗಿಸುವಂತೆ ನಟಿಸುತ್ತ ಹೋಗುವಾಗ ಕೆಲ ವಿದ್ಯಾರ್ಥಿಗಳು ನಮ್ಮ ಬಸ್ಸಿನಲ್ಲಿ ಹತ್ತುತ್ತಿದ್ದರು (ಹಗ್ಗದ ಒಳಗೆ)
ಹೀಗೆ ಸ್ಕೂಲ್ ತಲುಪಿದ ಕೂಡಲೇ ಬಸ್ಸನ್ನು (ಹಗ್ಗವನ್ನು ಮಡಿಚಿ) ಬ್ಯಾಗಿಗೆ ಸೇರಿಸಿ ಇಡಲಾಗುತ್ತಿತ್ತು ಕಾರಣ ಮತ್ತೆ ಸಂಜೆ ಬೇಕು ಹೀಗೆ ಹೋಗುವಾಗ ಹುಡುಗರು ಹುಡುಗಿಯರೂ ಕೆಲವು ಬೇರೆ ಮಕ್ಕಳು ಎಲ್ಲರು ಸೇರಿ ಗಲಾಟೆ ಮಾಡುತ್ತಾ ಕೆಲೊಂದು ಊರುಗಳ ಹೆಸರುಗಳನ್ನೂ ಹೇಳುತ್ತಾ ನಡೆಯುತ್ತಿತ್ತು ನಮ್ಮ ಬಸ್ಸು .
ಆದರೆ ನಾನು ಸುರೇಶನ ಮನೆಗೆ ಹೋದಾಗಲೆಲ್ಲ ಅವನು ಅಡಿಗೆ ಕೋಣೆಯಲ್ಲಿ ಅವನಮ್ಮ ಬಡಿಸುವ ತಿಂಡಿಯನ್ನು ಸರಿಯಾಗಿ ತಿನ್ನದೇ ಬೇಡ ಕಣೇ ,,, ಬೇಡ ಕಣೇ ಎಂದು ಕೂಗುತ್ತಿದ್ದ. ನಾನು ಎದುರು ಕೋಣೆಯಲ್ಲಿ ಕುಳಿತು ಕಾಯುತ್ತಿದ್ದೆ . ಅದಲ್ಲದೆ ಅವರಮ್ಮ ದಿನಾಲು ೫ ಅಥವಾ ೬ ತರಹದ ತಿಂಡಿ ಮಾಡುತ್ತಾರೆ. ಕಾರಣ ಅವರಮ್ಮ ಸುರೇಶ ಸ್ವಲ್ಪ ತುಪ್ಪ ಹಾಕ್ಕೊಳೋ ಅಂದ್ರೆ ಇವ್ನು ಬೇಡಾ ಕಣೇ ಅಂತ ಕೂಗ್ತಾನೆ, ಸುರೇಶ ಚಿತ್ರಾನ್ನ ಹಾಕೊಳೋ ಅಂದ್ರೆ ಬೇಡಾಕನೆ ಅಂತ ಕೂಗ್ತಾನೆ, ಸುರೇಶ ಉಪ್ಪಿಟು ಹಾಕೊಳೋ ಅಂದ್ರೆ ಇವ್ನು ಬೇಡಾ ಕಣೇ ಅಂತ ಕೂಗ್ತಾನೆ. ಇದನ್ನೆಲ್ಲಾ ದಿನವು ನಾನು ಕೆಳುತಿದ್ದರಿಂದ ನಮ್ಮ ಮನೆಗೆ ಬಂದು ನಮ್ಮ ಅಮ್ಮನಿಗೆ ಗೊಳುಹುಯುತಿದ್ದೆ ಅಲ್ಲಿ ಸುರೇಶನ ಅಮ್ಮ ನೋಡು ದಿನಾಲು ಅವನಿಗೆ ೫ - ೬ ತರಹದ ತಿಂಡಿ ಮಾಡಿ ಕೊಡುತ್ತಾರೆ ನೀನು ಮಾತ್ರ ನಂಗೆ ಒಂದು ತಿಂಡಿ ಮಾಡಿ ಕೊಡುತ್ತಿಯ ಅಂತ. ಅದಕ್ಕೆ ನನ್ನ ಅಮ್ಮ ಏನೆಲ್ಲಾ ಸಬೂಬು ಹೇಳಿ ಆಯ್ತು ನಾಳೆ ನಾನು ೫ - ೬ ತಿಂಡಿ ಮಾಡಿಕೊಡುತ್ತೇನೆ ಇವತ್ತು ಇದು ತಿಂದು ಶಾಲೆಗೆ ಹೋಗು ಅಂತ ಸಮಾಧಾನಿಸಿ ನನಗೆ ಕಳಿಸುತ್ತಿದ್ದರು.

ದಿನವು ನಾನು ಹಠ ಮಾಡ ತೊಡಗಿದೆ ಇದನ್ನು ನೋಡಿ ನನ್ನ ಅಮ್ಮ ಒಂದು ದಿನ ೪ ತರಹದ ತಿಂಡಿ ಮಾಡಿ ಕೊಟ್ಟರು. ಎಲ್ಲವನ್ನು ಸ್ವಲ್ಪ ಸ್ವಲ್ಪ ತಿಂದು ಸುರೇಶನ ಮನೆಗೆ ಓಡಿದೆ ಅಲ್ಲಿ ಎಂದಿನಂತೆ ಅವನ ತಿಂಡಿ ಕಾರ್ಯ ನಡೆದಿತ್ತು. ಈಗ ನನಗೆ ಮುಜುಗರ ವಿರಲಿಲ್ಲ ನೇರ ಹೋದವನೇ ಅಲ್ಲಿ ಕುಳಿತು ಸುರೇಶ ಬೇಗ ರೆಡಿಯಾಗೋ ಅಂದೇ. ಎಂದಿನಂತೆ ಅವನ ತಾಯಿ ಸುರೇಶನಿಗೆ ಬಲವಂತ ದಿಂದ ಅದು ಹಾಕ್ಕೊಳೋ ಅಂದ್ರೆ ಇವನು ಬೇಡ ಕಣೇ ,,,,, ಇದು ಹಾಕೊಳೋ ಅಂದ್ರೆ ಬೇಡ ಕಣೇ,,ಎಂದು ಕೂಗುತ್ತಿದ್ದ ನಾನು ಎದುರು ರೂಮಿನಲ್ಲಿ ಕೂತಿದ್ದವನು ನಿಧಾನವಾಗಿ ಅವನ ಅಡಿಗೆ ಕೊಣೆಗೆ ಬಗ್ಗಿ ನೋಡಿ ಸುರೇಶ ನಾನು ಇವತ್ತು ೪ ತರಹದ ತಿಂಡಿ ತಿಂದೆ ಕಣೋ ಅಂತ ಹೇಳಲು ಹೊರಟವನು ಅಲ್ಲಿಯ ಸನ್ನಿವೇಶ ನೋಡಿ ಸುಮ್ಮನ್ನಾಗಿ ಬಿಟ್ಟೆ ಕಾರಣ ವಿಷ್ಟೇ ಸುರೇಶ ಮಜ್ಜಿಗೆಯಲ್ಲಿ ಮುದ್ದೆ ತಿನ್ನು ತಿದ್ದ ಅವಳಮ್ಮ ಜೋರಾಗಿ ಪುಳಿಯಗರೇ ಹಾಕ್ಕೊಳೋ ಅಂತ ನಿಂತಲ್ಲೇ ಜೋರಾಗಿ ಹೇಳುತ್ತಿದ್ದಾರೆ ಇವನು ಜೋರಾಗಿ ಬೇಡಾ ಕಣೇ ,,,,, ಎ ,,,, ಎ ಎಂದು ಕೂಗುತ್ತಿದ್ದಾನೆ .,, ! ತುಪ್ಪ ಹಾಕ್ಕೊಳೋ ಬೇಡಾ ಕಣೇ ,,, ಎ ,, ಎ ,. ಚಿತ್ರಾನ ಹಾಕ್ಕೊಳೋ ಬೇಡಾ ಕಣೇ,,,,
ನನಗೆ ತಕ್ಷಣ ನನ್ನ ಅಮ್ಮನ ನೆನಪಾಯ್ತು
ಸಂಜೆ ಮನೆಗೆ ಹೋದವನೇ ಅಮ್ಮನಿಗೆ ಎಲ್ಲ ವಿಷಯ ಹೇಳಿ ಬಿಟ್ಟೆ ನನ್ನ ಅಮ್ಮ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳತೊಡಗಿದರು. ನಂತರ ಹೇಳಿದ್ದು ಈ ವಿಷಯ ಯಾರಿಗೂ ಹೇಳ ಬೇಡ ಅಂತ.

ಕಾಲ ಕ್ರಮೇಣ ಇದು ಹೇಗೋ ನಿಧಾನವಾಗಿ ಬೇಡಾ ಕಣೇ ,,,,,, ಎ ,,,,, ಎ ,,,, ಎಂಬುದೊಂದು ತಮಾಶೆಯಾಗಿ ಬದಲಾಗಿ ಹೋಯ್ತು. ಅದನ್ನು ನನ್ನವಳಿಗೆ ಯಾರೋ ಹೇಳಿಬಿಟ್ಟಿದ್ದಾರೆ. ನಾನು ಬಿಲ್ ನೋಡಿ ಬಿಸಿಯಾಗುವುದು ಬೇಡ ಅಂತ ಹಳೆಯ ಯಾವುದಾದರು ಒಂದು ಕಥೆಯನ್ನು ಇವಳು ಈ ರೀತಿ ನೆನಪಿಸಿ ನನ್ನನ್ನು ನನ್ನ ಹಿಂದಿನ ಲೋಕಕ್ಕೆ ತಳ್ಳಿ ಬಿಡುತ್ತಾಳೆ.
ಹೀಗೆ ಅಲ್ಲವೇ ಜೀವನ.

Sunday, 9 August 2009

ಪರೇಶ - ಪ್ರತಿಮೆಗಳು ಮತ್ತು ಸ್ಥಾಪನೆ

ಭಾನುವಾರ ವಾದ್ದರಿಂದ ಬೆಳಗ್ಗೆ ನಾನು ಸ್ಕೂಟರ್ ತೊಳೆಯುತ್ತಿದ್ದೆ ಅಂದರೆ ಕೈನೆಟಿಕ್ ಹೋಂಡ ಬ್ಲಾಕ್ ಅದು ನನ್ನ ಸರ್ವಸ್ವ. ತರಲೆ ಪರೇಶ ನನ್ನ ಸಹಾಯಕ್ಕೆ ನಿಂತಿದ್ದ. ಕೆಲಸಕ್ಕಿಂತ ಜಾಸ್ತಿ ಲಾಟು ಬಿಡುವುದು ಪರೆಶನ ಬುದ್ದಿ . ಇದ್ದಕ್ಕಿದ್ದಂತೆ ಪ್ರತಿಮೆ ಸ್ಥಾಪಿಸುವ ವಿಷಯ ಅದರ ಬಗ್ಗೆ ವಾದ ವಿವಾದಗಳ ವಿಷಯ ಶುರುಮಾಡಿದ ನಾನು ಕೆಲಸದಲ್ಲಿ ಮುಳುಗಿದ್ದೆ. ಇದರ ಮದ್ಯೆ ನಾನು ಪರೆಶನಿಗೆ ಕೇಳಿದೆ ಪ್ರತಿಮೆ ಅನಾವರಣದ ಬಗ್ಗೆ ನಿನ್ನ ಅಭಿಪ್ರಾಯ ಏನೋ ಪರೇಶ ಅಂದೇ ಅಷ್ಟೆ.

ಶುರುಮಾಡಿದ ಸಾರ್ ಇಲ್ ಕೇಳ್ರಿ ಸಾರ್ ದಿನಾ ಹೊಸ ಹೊಸ ಪ್ರತಿಮೆಗಳು ಬೇರೆ ಬೇರೆ ಕಡೆ ಸ್ಥಾಪಿಸಬೇಕು ಸಾರ್ ಅವಾಗ್ ಕೂಲಿ ಮಾಡವ್ರಿಗೆ ಕೆಲಸ ಸಿಗುತ್ತೆ , ಪ್ರತಿಮೆ ಮಾಡವ್ರಿಗೆ ಕೆಲಸ ಸಿಗುತ್ತೆ , ಅವರ ಮೇಲೆ ಅವಲಂಬಿತರಾದವರಿಗೆ ಊಟ ಸಿಗುತ್ತೆ ಗಲಾಟೆ ಮಾಡವ್ರಿಗೆ ಊಟ ಸಿಗುತ್ತೆ , ಬೇಡ ಅನ್ನವರಿಗೆ ಊಟ ಸಿಗುತ್ತೆ ಅದಕ್ಕೋಸ್ಕರ ಆಯೋಗಗಳನ್ನು ಶುರು ಮಾಡ್ತಾರೆ ಅವ್ರಿಗೆ ಊಟ ಸಿಗುತ್ತೆ , ಅದರ ವಿರುದ್ದ ಮತ್ತು ಪರ ಬ್ಯಾನರ್ ಬರಿಯುವವರಿಗೆ ಊಟ ಸಿಗುತ್ತೆ , ಟಿ ವಿ ಯಲ್ಲಿ ಪ್ರಚಾರ ಸಿಗುತ್ತೆ ಆಮೇಲೆ ಅದಕ್ಕೋಸ್ಕರ ಉಪಯೋಗಿಸೋ ವಸ್ತುಗಳು ವಾಹನಗಳು ಅವರಿಗೆ ಕೆಲಸ ಸಿಗುತ್ತೆ , ಒಂದಲ್ಲ ಒಂದು ರೀತಿಯಲ್ಲಿ ಬಡವ ಒಂದು ಹೊತ್ತಿನ ಊಟವನ್ನು ಹೇಗಾದರು ಪಡಿತಾನೆ ಸಾರ್ ಅದು ಬಹಳ ಕಷ್ಟ ಪಟ್ಟು.

ನಾವು ಭಾರತೀಯರು ಸಾರ್ ಎಲ್ಲವನ್ನು ಗೌರವಿಸಬೇಕು ಅದು ನಮ್ಮ ಆತ್ಮದಿಂದ ನಮ್ಮ ಮನಸ್ಸಿನಿಂದ ನಮ್ಮ ಸಂತೋಷ ದಿಂದ ಅದರಿಂದ ಯಾರಿಗೂ ತೊಂದರೆ ಯಾಗಬಾರದು ಯಾರ ಭಾವನೆಗಳಿಗೂ ಧಕ್ಕೆಯಾಗಬಾರದು , ಎಲ್ಲವು ಎಲ್ಲರಿಗು ಬೇಕು ಆದರೆ ನಮ್ಮ ನಿಮ್ಮ ಮತ್ತೊಬ್ಬರ ಭಾವನೆಗಳನ್ನು ಕೊಂದು ಏನು ಪ್ರಯೋಜನ ಸಾರ್

ನಾವು ಸ್ಥಾಪಿಸುವ ಪ್ರತಿಮೆಯನ್ನು ನಾವು ನೋಡಿದಾಗ ನಮಗೆ ಸಂತೋಷವನ್ನು ನೀಡಬೇಕು ಅದು ಬಿಟ್ಟು ಪ್ರತಿಮೆ ನಮ್ಮನ್ನು ನೋಡಿ ಅಳುವಂತಾಗಾಬಾರದು ಅಥವಾ ಪ್ರತಿಮೆಯನ್ನು ನಾವು ನೋಡಿ ಅಳುವಂತಾಗಬಾರದು.

ಅಲ್ವ ಸಾರ್ ಅಂದ, ಎನೋಪ ನಂಗೆ ನಿನ್ನಷ್ಟು ಬುದ್ದಿ ಇಲ್ಲ ಅಂದೇ, ಒಳ್ಳೆದಾಯ್ತು ಬಿಡಿ , ಯಾಕೋ ಅಂದೇ , ಈಗ ಪ್ರಪಂಚದ ಎಲ್ಲಾ ಸಮಸ್ಯೆಗಳು ಬುದ್ದಿವಂತರಿಂದಲೇ ಆಗುತ್ತಿರುವುದು ಅದೇ ದೊಡ್ಡ ಸಮಸ್ಯೆ ಗೊತ್ತ ಸಾರ್ ,,,,,,,

Saturday, 8 August 2009

ಸೂರ್ಯ ಮತ್ತು ಚಂದ್ರ (ಅಬುಧಾಬಿ)


" ಸೂರ್ಯ ಮತ್ತು ಚಂದ್ರ "
ಇದು ಅಬುಧಾಬಿಯ ಮರೀನಾ ಮಾಲ್ ಮುಖ್ಯ ದ್ವಾರದ ಒಳಭಾಗದಲ್ಲಿ ಇಡಲಾಗಿದೆ. ಇದರ ಶಿಲ್ಪಿ " ಲುಸಿಯಾನೋ ಮಸ್ಸಾರಿ" ಇದು Italiyan Embassy ಯಾ ಕೊಡುಗೆ. ಇದು ಏಕ ಶಿಲೆ (ಅಮೃತ ಶಿಲೆ) ಬಹಳ ಸುಂದರವಾಗಿದೆ.

ಕಿವಿಮಾತು

೧. ಇವಳೊಬ್ಬಳೆ ಪ್ರಪಂಚದಲ್ಲಿ ಸುಂದರಿ ಅಂತ ತಿಲ್ಕೊಂಡಿದಾಳೆ ಹ್ಞೂ ,,,,,,
೨. ನೋಡ್ದೇನೆ ಎಲ್ಲರು ನನ್ನ ಮಾತ್ರ ನೋಡ್ತಿದಾರೆ ,,,,,,, !
(ಕಥೆ ಹೇಳುವ ಚಿತ್ರಗಳು)

ಒಂದು ನಿಷ್ಕಲ್ಮಶ ಮುಗ್ಧ ನಗು


ಸಾವಿರ ವ್ಯಾಟ್ಸ್ನ ಒಂದು ನಿಷ್ಕಲ್ಮಶ ಮುಗ್ಧ ನಗು. ಇದು ನಾನು ಕುದುರೆ ಮುಖ ಉದ್ಯಾನವನ ಟ್ರಿಪ್ ನಿಂದ ಬರುವಾಗ ತೆಗೆದ ಒಂದು ಚಿತ್ರ. ಶಾಲೆಯನಂತರ ಒಂದು ಚಿಕ್ಕ ವ್ಯಾಪಾರ ನಿರತ ಶಾಲಾ ಬಾಲಕಿ. ಕ್ಯಾಮರ ತೆಗೆದ ಕೂಡಲೇ ಬೇಡಾ ಸಾರ್ ಅಂತ ನಕ್ಕಿದ್ದು. ರುಚಿಯಾದ ಬಾಳೆ ಹಣ್ಣು .

Sunday, 2 August 2009

ನಾವೆಷ್ಟು ಶ್ರೀಮಂತರೆಂದು ನಮಗೆ ಗೊತ್ತಾ ?

" ಶ್ರೀ ಶಾರದ ದೇವಿ ಅಂಧರ ವಿಕಾಸ ಕೇಂದ್ರ, ಶಿವಮೊಗ್ಗ "
ಮೊನ್ನೆ ಊರಿಗೆ ಹೋದಾಗ ನಾನು ಇಲ್ಲಿಗೆ ನನ್ನ ತಮ್ಮನೊಂದಿಗೆ ಬೇಟಿ ನೀಡಿದ್ದೆ. ಹೌದಲ್ಲವೇ ನಮ್ಮ ಬಳಿ ಎಲ್ಲವು ಇರುತ್ತದೆ, ಆದರೆ ಯಾವುದೋ ಇಲ್ಲದ ಒಂದು ಚಿಕ್ಕ ವಸ್ತುವಿಗಾಗಿ ಬಾರಿ ಬಾರಿ ನೆನಪಿಸುತ್ತಾ ಛೆ ಅದು ನಮ್ಮ ಬಳಿ ಇಲ್ಲವಲ್ಲ, ಎಂದು ಹೇಳುತ್ತಾ ಇರುವ ಎಲ್ಲ ವಸ್ತುಗಳನ್ನು ಸರಿಯಾಗಿ ಅನುಭವಿಸದೇ ಇಲ್ಲದೆ ಇರುವ ವಸ್ತುವನ್ನೇ ದೊಡ್ಡ ಕೊರತೆಯನ್ನಾಗಿ ಮಾಡಿ ಕೊಂಡು ಅದೇ ಚಿಂತೆಯಲ್ಲಿ ಮುಳುಗುತ್ತೇವೆ. ಉದಾ : ಮನೆಯಲ್ಲಿ ಎಲ್ಲವು ಇದೆ ಆದರೆ ಸೋಲಾರ್ ಇಲ್ಲ ಬಹಳ ಕಷ್ಟ ಆಗಿದೆ, ಮುಂದುವರೆಯುತ್ತಾ ಇನ್ನೊಬ್ಬರು ನನ್ನ ಬಳಿ ಇರುವುದು ೨೦೦೮ Nokia Cell ಛೆ ೨೦೦೯ ಇಲ್ಲವಲ್ಲ ಎಂಬ ಕೊರಗು, ಮತ್ತೊಬ್ಬರು ಎಲ್ಲ ಇದ್ದು Spotrs Car ಇಲ್ಲವಲ್ಲ ಎಂಬ ಕೊರಗು. ಮಿತಿಯೇ ಇಲ್ಲ ,,,,,,

ಅವನಿಗೆ ನನಗಿಂತ ಜಾಸ್ತಿ ಸಂಬಳ ಛೆ ' ಮತ್ತೊಬ್ಬ ಛೆ' ಅವನ ಮನೆ ನಮ್ಮದಕ್ಕಿಂತ ದೊಡ್ಡ ಮನೆ, ಹೀಗೇಕೆ ಎಲ್ಲರಂತೆ ಎಲ್ಲ ಇದ್ದು ಸಹ ಇರದೇ ಇರುವ ಯಾವುದೋ ಸಣ್ಣ ವಸ್ತು ನಮಗೆ ದೊಡ್ಡ ಕೊರತೆ ಯಾಗಿ ಕಾಣುತ್ತೇವೆ. ಕೆಲವರಂತೂ ನಮ್ಮ ಜೀವನವೇ ಬ್ಯಾಡ್ ಲಕ್ಕ್ ಎಂದು ಕೊರಗುವುದು, ಕುಡಿಯುವುದು ಅಳುವುದು ಹೊಡೆದಾಡುವುದು ಕದಿಯುವುದು ಏನೆಲ್ಲಾ ಮಾಡುತಾರೆ. ಕಾರಣ ಇಷ್ಟೇ ಕೊರತೆ ಎಂಬ ಕೊರಗು ಕಾಡುವುದರಿಂದ.

ಎಂದಾದರೂ ಒಂದು ದಿನ ಬಿಡುವು ಮಾಡಿಕೊಂಡು ನಾವು ಯಾವುದಾದರು ಒಂದು ಸರ್ಕಾರಿ ಆಸ್ಪತ್ರೆಗೆ ಬೇಟಿ ಕೊಟ್ಟರೆ ಆಗ ತಿಳಿಯಬಹುದು ನಾವೆಷ್ಟು ಶ್ರೀಮಂತರೆಂದು. ಕಾರಣ ಅಲ್ಲಿ ಇರುವ ರೋಗಿಗಳನ್ನು ಒಮ್ಮೆ ನೋಡಿ ಎಂತೆಂತ ರೋಗಗಳನ್ನು ಹೊತ್ತು ಬಂದವರನ್ನು ಕಾಣಬಹುದು. ನೀವೊಮ್ಮೆ ಚಿಂತಿಸಿ ನೋಡಿ ನಾವೆಷ್ಟು ಆರೋಗ್ಯವಂತರೆಂದು - ಕೆಲಸ ಮಾಡುತ್ತವೆ ಸಿನೆಮ ನೋಡುತ್ತೇವೆ ಪಿಕ್ನಿಕ್ ಹೋಗುತ್ತೇವೆ ಫೋಟೋ ತೆಗೆಯುತ್ತೇವೆ ಅದನ್ನು ನೋಡಿ ಆನಂದಿಸುತ್ತೇವೆ. ಸಮಾರಂಭಗಳಲ್ಲಿ ವಿಜ್ರಂಭಿಸುತ್ತೇವೆ, ಕಂಪ್ಯೂಟರ್ ಉಪಯೋಗಿಸುತ್ತೇವೆ ಹಾಡು ಕೇಳುತ್ತೇವೆ ಫೋಟೋ ನೋಡುತ್ತೇವೆ ..

ಎಲ್ಲವನ್ನು ಅನುಭವಿಸುತ್ತೇವೆ ಆರೋಗ್ಯವಿದೆ ಸಂತೋಷವಿದೆ ಸೌಭಾಗ್ಯವಿದೆ ಕನಸನ್ನು ಕಾಣುತ್ತೇವೆ ಅದನ್ನು ಅನುಭವಿಸುತ್ತೇವೆ ಅದರ ಬಗ್ಗೆ ಮಾತನಾಡುತ್ತೇವೆ. ಮತ್ತೇಕೆ ಇಲ್ಲದ ಚಿಕ್ಕ ವಸ್ತುವಿಗಾಗಿ ಕೊರಗುವುದು. ನಮ್ಮಲ್ಲಿ ಇರುವುದೆಲ್ಲವೂ ಶ್ರೀಮಂತಿಕೆಯೇ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಅಲ್ಲವೇ ಹೌದು ಇವೆಲ್ಲವೂ ನಮ್ಮ ಶ್ರೀಮಂತಿಕೆಯೇ ,,,,,,,,,, ಕಾರಣ

ಚಿಂತಿಸಿ ಒಂದು ಕ್ಷಣ ನಮಗೆ " ಆರೋಗ್ಯ ಸರಿಯಿಲ್ಲದೆ " ಅಥವಾ ನಮಗೆ " ಎರಡು ಕಣ್ಣುಗಳು ಇಲ್ಲದೆ ಇದ್ದಲ್ಲಿ " ನಮ್ಮ ಸ್ತಿತಿ ಎನಾಗಬುದಿತ್ತು . ಆದ್ದರಿಂದ ಸ್ನೇಹಿತರೇ ಇರುವುದನ್ನು ಸಂತೋಷದಿಂದ ಅನುಭವಿಸಿ , ಆ ಸೃಷ್ಟಿಕರ್ತನನ್ನು ಸ್ಮರಿಸಿ
ಗೌರವಿಸಿ ಈಗ ನೀವಿರುವ ಸ್ತಳದಲ್ಲೇ ಯೋಚಿಸಿ ನಾವೆಷ್ಟು ಶ್ರೀಮಂತರೆಂದು .

ಇದೆಲ್ಲ ಹೇಳಲು ಕಾರವಿಷ್ಟೇ " ಶ್ರೀ ಶಾರದದೇವಿ ಅಂಧರ ವಿಕಾಸ ಕೇಂದ್ರ " ಇದು ಶಿವಮೊಗ್ಗದ ಮುಖ್ಯ ಬಸ್ಸು ನಿಲ್ದಾಣದಿಂದ ಕೆಲವೇ ಕೀ, ಮೀ, ದೂರದಲ್ಲಿದೆ . ಸ್ತಳ " ಅನುಪಿನಕಟ್ಟೆ " ಗೋಪಾಳ " ಶಿವಮೊಗ್ಗ .
ಒಮ್ಮೆ ಇಲ್ಲಿ ಬೆಟಿಕೊಡಿ. ಇಲ್ಲಿ ಇರುವ ಎಲ್ಲ ಮಕ್ಕಳು ಅಂಧರು, ಇಲ್ಲಿ ಅವರಿಗೆ ವಿಧ್ಯಬ್ಯಾಸ , ತೋಟಗಾರಿಕೆ , ಹಾಡುಗಾರಿಕೆ, ತಬಲಾ ತರಬೇತಿ ಇದೆಲ್ಲವನ್ನೂ ನೀಡಲಾಗುತ್ತಿದೆ.
ನಿಮ್ಮ ಪ್ರೀತಿ ಅವರಿಗೆ ಒಂದು ಕೊಡುಗೆಯಾಗಲಿ ,,,,,,,,,

" ನಿಮಗಿದು ಗೊತ್ತೇ ಅಂಧರಿಗೆ ಕನಸುಗಳು ಬೀಳುವುದಿಲ್ಲ "

ಕರುಣೆ ಬೇಡ ಪ್ರೀತಿಯನ್ನು ಕೊಡಿ - ನಾವೆಷ್ಟು ಶ್ರೀಮಂತರೆಮ್ಬುದು ತಿಳಿದುಕೊಳ್ಳಿ
ಸೃಷ್ಟಿಕರ್ತನು ನಮ್ಮನ್ನು ನಿಮ್ಮನ್ನು ಆ ಮಕ್ಕಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತಾ , ನಿಮ್ಮ ಆತ್ಮೀಯ ಇಸ್ಮಾಯಿಲ್ ಶಿವಮೊಗ್ಗ
(ದಯವಿಟ್ಟು ಕ್ಷಮಿಸಿ )