Thursday, 12 November 2009

ನೆನ್ನೆ ಇಂದು ಮತ್ತು ನಾಳೆ

ನೆನ್ನೆ ಇಂದು ಮತ್ತು ನಾಳೆ
ಎಲೆ ಅಡಿಕೆ ಜಗಿಯುತ್ತಾ ಮತ್ತೊಂದು ಕಡೆ ಬಿಸಿಯಾದ ಚಹಾ ಸವಿಯುತ್ತ ಇಂದು ಮತ್ತು ನಾಳೆಯ ತುಮುಲದೊಂದಿಗೆ, ಕಳೆದು ಹೋದ ಸಮಯ ಮತ್ತು ಜೀವನದ ಮಜಲುಗಳನ್ನು ನೆನೆಯುತ್ತಾ, ನಾಳಿನ ಸಮಯ ಮತ್ತು ಜೀವನದ ಮಜಲುಗಳನ್ನು ಸರಿಪಡಿಸುವ ಒಂದು ಸಿದ್ದತೆಯೊಂದಿಗೆ ಯಾವುದು ತಪ್ಪು ಯಾವುದು ಸರಿ ಎಂಬ ಯೋಚನೆಗಳ ಮೆಲುಕುಗಳೊಂದಿಗೆ ಒಂದು ಮುಂಜಾನೆ ,,,,,
(My canon clip)

Monday, 19 October 2009

ಮಂಡಗದ್ದೆ ಪಕ್ಷಿ ಧಾಮ ಪಕ್ಷಿಗಳ (ಕಣ್ಣೀರ) ಕಲರವ

ಮಂಡಗದ್ದೆ ಪಕ್ಷಿ ಧಾಮ ವೆಂದರೆ ಎಲ್ಲರಿಗು ತಿಳಿದಿರುವ ವಿಷಯ. ಶಿವಮೊಗ್ಗದಿಂದ ಕೆಲವೇ ನಿಮಿಷಗಳ ಪ್ರಯಾಣದಲ್ಲಿ ಅಲ್ಲಿ ತಲುಪಬಹುದು, ಹೊಸಹಳ್ಳಿ ಗಾಜನೂರು ಮಂಡಗದ್ದೆ. ತುಂಗಾ ನದಿಯ ತೀರದಲ್ಲೇ ಚಲಿಸುವ ರಸ್ತೆ ಮಂಡಗದ್ದೆ ಪಕ್ಷಿಧಾಮಕೆ ತಲುಪುತ್ತದೆ ರಸ್ತೆಯ ಪಕ್ಕದಲ್ಲೇ ತುಂಗಾ ನದಿ ಅದರ ಒಂದು ಭಾಗದಲ್ಲಿ ಪಕ್ಷಿಗಳ ಕಲರವ ಅಲ್ಲೊಂದು ಪಕ್ಷಿ ವೀಕ್ಷಣ ಗೋಪುರ, ಈ ಗೋಪುರಕ್ಕೆ ಹತ್ತುವಾಗ ಬಹಳ ಜಾಗರೂಕತೆಯಿಂದ ಹತ್ತ ಬೇಕು.

ಈ ದಾರಿಯ ಮೂಲಕ ಮಂಗಳೂರು ಹೋಗುವಾಗಲೆಲ್ಲ ನಾನು ಬಹಳ ನೆನಪಿಸಿಕೊಳ್ಳುವ ಪಕ್ಷಿಧಾಮಕ್ಕೆ ಒಂದು ವಿಷೆಶತೆಯು ಇದೆ ಅದೆಂದರೆ ಮಂಜಣ್ಣನ ಮಗಳು ಲಕ್ಷ್ಮಿ . ಕಾರಣವಿಷ್ಟೇ ಅಂದು ನಾನು ಕಾಲೇಜಿನಲ್ಲಿದ್ದಾಗ ನಾವು ಸ್ನೇಹಿತರೆಲ್ಲ ಸೇರಿ ಬೈಕಿನಲ್ಲಿ ಪಕ್ಷಿ ಧಾಮ ನೋಡಲು ಹೋಗಿದ್ದೆವು. ಹೀಗೆ ಹೋದವರು ಗೋಪುರ ಹತ್ತಿ ಪಕ್ಷಿಗಳನ್ನು ನೋಡುತ್ತಾ ಒಬ್ಬಬ್ಬರದು ಒಂದೊಂದು ಅಭಿಪ್ರಾಯಗಳನ್ನು ತೋರ್ಪಡಿಸುತ್ತ ಇದ್ದಾಗ ಕೆಳಗೆ ಬಟ್ಟೆ ತೊಳೆಯಲು ಬಂದಿರುವ ಹುಡುಗಿಯರಲ್ಲಿ ಲಕ್ಷ್ಮಿಯು ಇದ್ದಳು ಆದರೆ ಅವಳು ನನ್ನನ್ನು ನೋಡಿರಲಿಲ್ಲ ಅಲ್ಲದೆ ನನ್ನ ಸ್ನೇಹಿತರಾರಿಗೂ ಪರಿಚಯವಿಲ್ಲ ಆದರೆ ಇವರ ಕುಟುಂಬ ಪೂರ್ತಿ ನಮ್ಮ ಮನೆಯವರಿಗೆ ಗೊತ್ತು ಇವಳಿಗೂ ಗೊತ್ತು. ಹೀಗಿರುವಾಗ ನಾನು ಸುಮ್ಮನೆ ಇದ್ದೆ ಕಾರಣ ಅಲ್ಲಿ ಏನಾದರು ತಲೆ ಹರಟೆ ನಡೆದರೆ ಅದು ನೇರ ನಮ್ಮ ಮನೆ ತಲುಪುತ್ತದೆ ಎಂಬುದು ಖಾತ್ರಿ, ನಾವು ತಂದಿದ್ದ ತಿಂಡಿ ಪೊಟ್ಟಣಗಳನ್ನು ಬಿಚ್ಚು ತಿದ್ದಂತೆಯೇ ಎಲ್ಲಿಂದಲೋ ಹಲವಾರು ಮಂಗಗಳು ಬಂದು ಸೇರತೊಡಗಿದವು ಅದನ್ನು ನೋಡಿ ನಾವೆಲ್ಲರೂ ಹೆದರಿ ಆಚೆ ಈಚೆ ಅದನ್ನು ಓಡಿಸ ತೊಡಗಿದೆವು.
ಇದನ್ನು ನೋಡಿ ಲಕ್ಷ್ಮಿ ತುಳುಬಾಷೆಯಲ್ಲಿ ಇಲ್ಲಿ ನೋಡೇ ಮಂಗಗಳನ್ನು ನೋಡಿ ಮಂಗಗಳು ಮಾಡ್ತಾ ಇರೋದು ಅಂದು ಬಿಟ್ಟಳು ಅಲ್ಲಿ ನಮ್ಮ ಸ್ನೇಹಿತರಾರಿಗೂ ತುಳು ಬರುವುದಿಲ್ಲ ಆದರೆ ನಂಗೆ ತುಳು ಗೊತ್ತು ಕೂಡಲೇ ನಾನು ಗೋಪುರದಿಂದ ಬಗ್ಗಿ ತುಳುವಿನಲ್ಲಿ ಏ ಲಕ್ಷ್ಮಿ ಛೆ ನೀನು ನಮಗೆ ಈ ರೀತಿ ಹೇಳಬಾರದಿತ್ತು ಅಂದು ಬಿಟ್ಟೆ ಅನಿರೀಕ್ಷಿತವಾಗಿ ನನ್ನನ್ನು ನೋಡಿದ ಲಕ್ಷ್ಮಿ ತೊಳೆಯುವ ಬಟ್ಟೆಯನ್ನು ಬಿಟ್ಟು ಮನೆಗೆ ಓಡಿದಳು .
ಮತ್ತೆ ಅವಳನ್ನು ನೋಡುವುದೇ ಅಪರೂಪ ವಾಯ್ತು ಕಾರಣ ವಿಷ್ಟೇ ಎಲ್ಲಿ ಸುದ್ದಿ ಅವರಪ್ಪನಿಗೆ ತಲುಪುತ್ತದೋ ಅಂತ ಅವಳಿಗೆ ಹೆದರಿಕೆ. ಇವೆಲ್ಲ ಒಂದು ಹುಡುಗಾಟಿಕೆ ತರ ಮುಗಿದು ಹೋಯ್ತು.
ಅಗಾಗ ಮಂಡಗದ್ದೆಗೆ ಹೋಗುವುದು ನೆಂಟರು ಬೇರೆ ಬೇರೆ ಊರಿಂದ ಬಂದಾಗ ಅವರನ್ನು ಕರೆದು ಕೊಂಡು ಹೋಗುವುದು ಹೀಗೆ ನಡೆದಿತ್ತು. ಅದೊಂದು ಅದ್ಬುತ ಲೋಕವಾಗಿತ್ತು ದೂರ ದೂರ ದೇಶದಿಂದ ಪಕ್ಷಿಗಳು ಅಲ್ಲಿಗೆ ಬರುತ್ತಿದ್ದವು ಹರಿಯುವ ನೀರು ಅದ್ರ ಮದ್ಯೆ ಮರಗಳು ಅಲ್ಲಿ ಪಕ್ಷಿಗಳ ಗೂಡು ಅದರ ಕಲರವ ,,,

ಅದೆಲ್ಲ ಈಗ ಒಂದು ನೆನಪು ಮಾತ್ರ ಕಾರಣ ಈಗ ಅಲ್ಲಿ ಹಿಂದಿನಂತೆ ಪಕ್ಷಿ ಗಳು ಇಲ್ಲ ಮೊನ್ನೆ ನಾನು ಅಲ್ಲಿ ಹೋದಾಗ ಕಂಡದ್ದು ಪಕ್ಷಿಗಳ ಕಣ್ಣೀರು . ಪ್ರಕೃತಿಯ ವಿಕೋಪದಿಂದ ಉಕ್ಕಿ ಹರಿದ ನೀರು ಪಕ್ಷಿಗಳ ಗೂಡುಗಳನ್ನೆಲ್ಲ ಕೊಚ್ಚಿಕೊಂಡು ಹೋಗಿದೆ, ಅಲ್ಲಿದ್ದ ಮರಗಳು ಹಿನ್ನೀರಿನ ಹೆಚ್ಚಳದಿಂದಾಗಿ ಮುಳುಗಿ ಹೋಗಿವೆ , ಅದಕ್ಕಿಂತ ಹೆಚ್ಚಾಗಿ ಮನುಷ್ಯ ಎಂಬ ರಾಕ್ಷಸ ಪಕ್ಷಿಗಳ ಬೇಟೆಯನ್ನು ಪ್ರಾರಂಬಿಸಿದ್ದಾನೆ ಅದರಿಂದಲೂ ಹೆದರಿ ಅವು ದೂರಾಗಿವೆ. ಸುಂದರ ಪಕ್ಷಿಧಾಮ ನೆನಪುಗಳ ಸರಣಿಯಲ್ಲಿ ಮರೆಯಾಗಿದೆ ನಾನು ಅದೇ ಸ್ಥಳದಲ್ಲಿ ಹಿಂದೆ ತೆಗೆದ ಫೋಟೋಗಳು ಇಂದಿನ ಫೋಟೋಗಳಿಗೆ ಹೊಲಿಕೆಯಾಗುತ್ತಿಲ್ಲ. ತೊಂದರಯಿಲ್ಲ ಇಂದಲ್ಲ ನಾಳೆ ನನ್ನ ಮಂಡಗದ್ದೆ ಪಕ್ಷಿ ಧಾಮ ಮತ್ತೆ ಸುಂದರತೆಯನ್ನು ಪಡೆದು ಕೊಳ್ಳುತ್ತದೆ ಅದರ ನಿರೀಕ್ಷೆಯಲ್ಲಿ ಕಾಯುತ್ತ ಇದ್ದೇನೆ ,,,,,,
ಹೆಚ್ಚಿನ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ :-
http://picasaweb.google.com/IsmailMkShivamogga/MandagaddeShivamoga#

"ನಗರ ಕೋಟೆ" ಜೀವನದಲ್ಲಿ ಒಮ್ಮೆಯಾದರು ನೋಡಿರಿ


ಅಂದು ನಾನು ಡಿಗ್ರಿಯಲ್ಲಿದ್ದಾಗ ಬೇಕಲ ಕೋಟೆ ನೋಡಲು ಹೋಗಿದ್ದೆ, ಆಗ ಅಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ ಅದೊಂದು ನಿರ್ಜನ ಪ್ರದೇಶವಾಗಿತ್ತು ಗಿಡ ಗಂತಿಗಳೆಲ್ಲ ಬೆಳೆದು ಅದೊಂದು ಬೇರೆಯೇ ವಾತವರಣ ಇತ್ತು. ಕಳೆದ ಡಿಸೆಂಬರಿನಲ್ಲಿ ಅಲ್ಲಿ ಹೋದಾಗ ಅದೊಂದು ಹೊಸ ಬೇಕಲ ಕೋಟೆ ಅದರ ಸುಂದರತೆಗೆ ಬದಲಿಲ್ಲ ಹಾಗೆ ಬದಲಾಗಿದೆ. ಈಗಲ್ಲಿ ಪ್ರವೇಶ ಶುಲ್ಕ ಕೊಡಬೇಕು ಸ್ಟಿಲ್ ಕ್ಯಾಮರಕ್ಕೆ ಶುಲ್ಕ, ವೀಡಿಯೋ ಕ್ಯಾಮ್ ಗೆ ಬೇರೆ ಶುಲ್ಕ, ಶೌಚಾಲಯ ವೆವಸ್ತೆ ಮಾಡಿದ್ದಾರೆ ಎಲ್ಲವು ಅಚ್ಚುಕಟ್ಟಾಗಿದೆ. ದಿನವು ಸಾವಿರಾರು ಜನರು ನೋಡಲು ಬರುತ್ತಾರೆ ಬಳಷ್ಟು ಸಿನಿಮಾ ಶೂಟಿಂಗಳು ಅಲ್ಲಿ ನಡೆಯುತ್ತವೆ. ಅಂದರೆ ಪ್ರವಾಸೋದ್ಯಮ ಎಚ್ಚತ್ತು ಕೊಂಡಿದೆ ಅದರ ವರಮಾನವು ಪಕ್ಕದ ಕೇರಳ ರಾಜ್ಯಕ್ಕೆ ಬಹಳಷ್ಟು ಬರುತ್ತಿದೆ.

ಇದೆಲ್ಲ ಹೇಳಲು ಕಾರಣ ನಾನು ಈ ಕಾಂಕ್ರೀಟ್ ಕಾಡಿನಲ್ಲಿದ್ದರು ಗೂಗಲ್ ನಲ್ಲಿ ಅಗಾಗ ನಮ್ಮ ಭಾರತವನ್ನು ಅದರಲ್ಲೂ ನಮ್ಮ ಕರ್ನಾಟಕವನ್ನು ಆದಷ್ಟು ಕೂಲಂಕಷ ವಾಗಿ ನೋಡಲು ಪ್ರಯತ್ನಿಸುತ್ತಿರುತ್ತೇನೆ. ಅದರಲ್ಲಿ ನನಗೆ ಅತಿಯಾಗಿ ಅಗಾಗ ಕಾಡುವ ಕೆಲವು ಸ್ಥಳಗಳೆಂದರೆ " ನಗರ ಕೋಟೆ " ಕವಲೇ ದುರ್ಗಾ " ಹಂಪಿ " ಜೋಗ " ಬಾಬಬುಡನಗಿರಿ " ಆಗುಂಬೆ " ಹುಲಿಕಲ್ಲು " ಶಿರಾಡಿ ಘಾಟ್ " ಕೊಡಚಾದ್ರಿ " ಯಾಣ " ಚಿತ್ರ ದುರ್ಗ " ಮಡಿಕೇರಿ " ಕುದುರೆಮುಖ " ಇನ್ನು ಹಲವಾರು ನಾನು ಇಷ್ಟ ಪಡುವಂತ
ಅದರಲ್ಲಿ ಈ ಬಾರಿ ನೋಡಲೇಬೇಕು ಎಂದು ತೀರ್ಮಾನಿಸಿದ್ದ ಕೆಲವು ಸ್ಥಳಗಳನ್ನು ನೋಡಿ ಸಂತೋಷವು ಬೇಸರವು ಆಯ್ತು ಕಾರಣ ಹಲವಾರು. ನಗರ ಕೋಟೆ ನೋಡಲು ತೀರ್ಮಾನಿಸಿ ಹೊರಟ ನಾವು ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಹೊರಟು ಅರಗ' ಅರಳಿ ಸುರಳಿ ' ಹಿಲ್ಕುಂಜಿ 'ಕವಲೇದುರ್ಗ' ನಗರ ' ಹೊಸನಗರ ಸೂಫಿ ಶ್ರೈನ್ ಎಲ್ಲ ನೋಡುತ್ತಾ ನಗರ ಕೋಟೆ ತಲುಪಿದೆ ಜೊತೆಯಲ್ಲಿ ಮನೆಯವರೆಲ್ಲರೂ ಇದ್ದರು. ಬೆಳಗಿನಿಂದಲೇ ಚಿಟಿ ಪಿಟಿ ಮಳೆಯಲ್ಲಿ ತಂಪು ಗಾಳಿಯಲ್ಲಿ ಒಮ್ಮೆ ನದಿ ಕಂಡರೆ ಮತ್ತೊಮ್ಮೆ ಕಾಡು ಮತ್ತೊಮ್ಮೆ ಕಾನನ ಮತ್ತೊಮ್ಮೆ ಪ್ರಾಣಿಗಳು ಮತ್ತೊಮ್ಮೆ ಪಕ್ಷಿಗಳ ಕಲರವ ಇವೆಲ್ಲವುಗಳ ಮದ್ಯೆ ನಮ್ಮ ವಾಹನ ನಿಧಾನವಾಗಿ ಸಾಗುತಿತ್ತು. ಮಳೆಯಲ್ಲಿ ನೆಂದು ಬರುವ ಮಣ್ಣಿನ ಸುವಾಸನೆ ಚಿರ್ ಚಿರ್ ಎಂದು ವಾಹನದ ಟೈರಿಗೆ ಹಾರಿದ ನೀರಿನ ಶಬ್ದ , ಕೆಲೊಮ್ಮೆ ಕಾಡಿನ ಮದ್ಯೆ ಹೋಗುವಾಗ ಮರಗಳ ಮೇಲಿನಿಂದ ಬೀಳುವ ದಪ್ಪ ದಪ್ಪ ಮಳೆನೀರಿನ ಹನಿಗಳ ಶಬ್ದ, ಕೆಲೊಮ್ಮೆ ದಾರಿಯಲ್ಲಿ ಸೌದೆಯನ್ನು ಹೊತ್ತು ತಲೆಯ ಮೇಲಿಟ್ಟು ತಮ್ಮದೇ ಆದ ಭಂಗಿಯಲ್ಲಿ ಮಳೆಯನ್ನು ಗಾಳಿಯನ್ನು ಲೆಕ್ಕಿಸದೆ ನಡೆದು ಹೋಗುತ್ತಿರುವ ಹೆಂಗಸರು ಹುಡ್ಗಿಯರ ಸಾಲು, ಗೋಪ್ಪೆ ಹೊದ್ದು ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಜನರು ಛತ್ರಿd ಜನರು ಬಸ್ಸಿಗಾಗಿ ಕಾಯುತ್ತಿರುವ janaru ದೂರ ದೂರದಲ್ಲಿ ಮನೆಗಳು ಹೀಗೆ ನೋಡುತ್ತಾ ನೋಡುತ್ತಾ ದಾರಿ ಸವೆದದ್ದು ತಿಳಿಯಲಿಲ್ಲ ಅದೋ ಬಂತು ನಗರ ಕೋಟೆ.

ವಾಹನದಿಂದ ಇಳಿದು ಕೋಟೆಯ ಮಹಾ ದ್ವಾರದಿಂದ ಒಳಬಂದೆವು ಅಲ್ಲಿಗೆ ತಲುಪುವಾಗಲೇ ಸುತ್ತಲು ನೀರು ಇರುವುದನ್ನು ಸೂಫಿ ಶ್ರೈನ್ ನಿಂದ ನೋಡಿ ತಿಳಿಯಬಹುದಾಗಿತ್ತು. ಮನುಷ್ಯ ತನ್ನ ಜೀವನದಲ್ಲಿ ಒಮ್ಮೆಯಾದರು ಅದನ್ನು ನೋಡಲೇಬೇಕು. ಮಂಜು ಮುಸುಕಿದ ವಾತವರಣ ಜಿನಿ ಜಿನಿ ಮಳೆ ಸುತ್ತಲು ನೀರು ಅಲ್ಲೊಂದು ಇಲ್ಲೊಂದು ಸೇತುವೆ, ದೂರ ದೂರದಲ್ಲಿ ಅಲ್ಲೊಂದು ಇಲ್ಲೊಂದು ಮನೆ, ಹಸಿರಿನ ರಾಶಿ ಹೌದು ನನ್ನೂರಿಂದ ಕೆಲವೇ ಗಂಟೆಗಳ ಅವಧಿಯಲ್ಲಿ ತಲುಪುವ ಈ ಸೌನ್ದರ್ಯ ರಾಶಿಯನ್ನು ನಾನು ನೋಡಿರಲಿಲ್ಲ ಅಂದ ಮಾತ್ರಕ್ಕೆ ಇದನ್ನು ನಾನು ಬೇರೆ ಕೊಟೆಗಳೊಂದಿಗೆ ಹೋಲಿಸುತ್ತಿಲ್ಲ ಆದರು ಹಸಿರಿನ ಮದ್ಯೆ ಇಂದೊಂದು ಹಸಿರು ರಾಶಿಯಾಗಿ ಕಂಡಿತು ಇದನ್ನು ನೋಡಲು ಸೂಕ್ತ ಸಮಯ ವೆಂದರೆ ಆಗಸ್ಟ್ ಸೆಪ್ಟೆಂಬರ್ ಒಕ್ಟೋಬರ್ ನವಂಬರ್ ಡಿಸೆಂಬರ್ ಇವು ಒಳ್ಳೆಯ ಸಮಯ ಕಾರಣ ಮಳೆಯಲ್ಲಿ ಎಲ್ಲವು ಹಸಿರಾಗಿ ನದಿಗಳು ತುಂಬಿ ಸುತ್ತಲ ನೀರಿನ ಮದ್ಯೆ ಈ ಕೋಟೆ ಕಾಣುತ್ತದೆ.
ಇಷ್ಟೆಲ್ಲಾ ಆದರು ಬೇಸರದ ವಿಷಯವೆಂದರೆ ಅಲ್ಲಿ ಯಾವುದೇ ವೆವಸ್ತೆ ಇಲ್ಲ ಅಂದರೆ ದೂರದಿಂದ ಬರುವ ಪ್ರಾವಾಸಿಗರಿಗಾಗಿ ಬೇಕಾಗಿರುವುದು ಒಂದು ಶೌಚಾಲಯ ಮತ್ತು ಕುಡಿಯುವ ನೀರಿನ ವೆವಸ್ತೆ ಅಷ್ಟೆ ಮುಖ್ಯ ವಾಗಿ ಅದೇ ಇಲ್ಲ. ಅದಾದ ನಂತರ ಒಳ ಹೋದರೆ ಅಲ್ಲಿ ಕಾಣುವುದು ದನ ಎಮ್ಮೆ ಗಳು ಮೆಯುತ್ತಿರುವುದು ಎಲ್ಲವು ಅಲ್ಲೋಲ ಕಲ್ಲೋಲ ನೀರಿಲ್ಲದ ಹೊಂಡಗಳು ಹಾಳಾಗಿ ಬೀಳಾಗಿ ಹೋದ ವೆವಸ್ತೆ ಪಾಚಿಗಟ್ಟಿರುವ ದರ್ಬಾರ್ ಸ್ತಳ ಇವೆಲ್ಲವನ್ನೂ ಸರಿ ಮಾಡಿ ದುರಸ್ತಿ ಗೊಳಿಸಿ ಚಿಕ್ಕ ಒಂದು ಪ್ರವೇಶ ಶುಲ್ಕವನ್ನು ಇತ್ತು ಅದರಿಂದಲೇ ಬರುವ ವರಮಾನವನ್ನು ಎಲ್ಲ ಅಬಿರುದ್ದಿ ಕಾರ್ಯಗಳಿಗೆ ಬಳಸಬಹುದಲ್ಲ , ಅದೇ ರೀತಿ ಮುಂದುವರೆದು ಬೇಕಲ ಹೋಗುವ ನಮ್ಮ ಕನ್ನಡ ಸಿನಿಮಾ ತಯಾರಕರು ತಮ್ಮ ಸಿನಿಮಾಗಳನ್ನು ಇಲ್ಲಿಯೇ ಚಿತ್ರಿಸಬಹುದಲ್ಲ , ಹೀಗೆ ಅಲ್ಲವೇ ಅಭಿರುದ್ದಿ ಪ್ರಾರಂಭ ಗೊಳ್ಳುವುದು .
ನಾನು ಅಂದು ನೋಡಿದ ಬೇಕಲ ಕೋಟೆ ಹೀಗೆಯೇ ಇತ್ತು ಆದರೆ ಇಂದು ಎಲ್ಲ ಸಿನೆಮದವ್ರಿಗೂ ಗೊತ್ತು ಬೇಕಲ. ಹ್ಹಾಗೆಯೇ ಮುಂದೊಂದು ದಿನ " ನಗರ ಕೋಟೆಯೂ ಎಲ್ಲರಿಗು ತಿಳಿಯುವಂತಾಗಲಿ" ಎಲ್ಲರು ನೋಡಿ ಸಂತೋಷ ಪಡುವಂತಾಗಲಿ ಎಂದು ನಿರೀಕ್ಷೆಯಲಿ ,,,,,,,,,, ನಿಮ್ಮ ಸ್ನೇಹಿತ
ಹೆಚ್ಚಿನ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ :-

Thursday, 8 October 2009

ಕವಿ ಕುವೆಂಪುರವರ ಕುಪ್ಪಳ್ಳಿಯ ಮನೆಯಲ್ಲಿ ನಾನು ನನ್ನವರೊಂದಿಗೆ



ನಲ್ಲಿಯನ್ನು ತಿರುವುತ್ತಿದ್ದಂತೆ ಎರಡು ಕಾಲುಗಳಮೇಲೆ ನೀರು ಸುರಿಯತೊಡಗಿತು ನನ್ನ ಎರಡು ಕೈಗಳನ್ನು ತೊಳೆಯುತ್ತ ಬೊಗಸೆತುಂಬ ನೀರನ್ನು ಎತ್ತಿ ಮುಖದ ಮೇಲೆ ಸಿಂಪಡಿಸಿದೆ. ಇಡಿ ಮೈ ರೋಮಾಂಚನ ಗೊಂಡು ಸಂತೋಷ ಹೇಳತೀರದಾಯ್ತು, ಆ ನೀರು ಹಾಗಿದೆ ಮಲೆನಾಡ ಮದ್ಯದಲಿ ಕಾಡು ಮತ್ತು ಗುಡ್ಡಗಳ ಮದ್ಯೆ ಸುಂದರವಾದ ಮನೆ ಅದರಲ್ಲಿ ನೆನಪುಗಳ ಆಗರ ಸಂಸ್ಕೃತಿಯ ಒಡಲು ತಂಗಾಳಿಯ ತಂಪು ಪ್ರೀತಿಯ ಆರ್ದತೆ ಕಾಂಕ್ರೀಟ್ ಕಾಡಿನಿಂದ ನಾನು ನನ್ನೂರು ಮಲೆನಾಡಿಗೆ ೭ ದಿನಗಳ ರಜೆಯಲ್ಲಿ ಬಂದಿದ್ದೇನೆ ಅದೊಂದು ಸಂತೋಷವೆಬೇರೆ ಅದು ಅನುಭವಿಸಿಯೇ ತೀರಬೇಕು, ಮತ್ತೆ ಮತ್ತೆ ನೀರನ್ನು ಮುಖದ ಮೇಲೆ ಹಾಕುತ್ತ ಪ್ರತಿಸಾರಿಯೂ ಪುಳಕಿತ ಗೊಳ್ಳುತ್ತಾ ಮೈ ಮನ ಎಲ್ಲ ಸಂತೋಷವನ್ನು ಒಮ್ಮಲೆ ಅನುಭವಿಸ ತೊಡಗಿದೆ,
ಆಗ ಹಿಂದಿನಿಂದ ಒಂದು ಶಬ್ದ ಬಂತು ಅದು ಅಕ್ಕನ ಮಗಳು ಐಶ್,
ಹೇಗಿದೆ ನೀರು ನಿಮ್ಮ ದುಬೈಯಲ್ಲಿ ಈ ನೀರು ಸಿಗುತ್ತಾ ? ಸಿಕ್ಕರೂ ಆ ನೀರಿಗೆ ಈ ಆತ್ಮೀಯತೆ ಇದೆಯಾ ಇದ್ದರು ಅದಕ್ಕೆ ಈ ರೋಮಾಂಚನದ ಶಕ್ತಿ ಇದೆಯಾ, ಕಾರಣ ನಾನು ಮೊದಲು ಬಂದು ಇಲ್ಲಿ ಕುಳಿತದ್ದು ಅಣ್ಣ ನಿಮ್ಮ ಪ್ರತಿಕ್ರಿಯೆ ನೋಡಲಿಕ್ಕಾಗಿಯೇ ಎಂದು ನಗುತ್ತ ಹೇಳತೊಡಗಿದಳು ಹೌದು ನೀವು ಉತ್ತರ ಕೊಡುವುದು ಬೇಡ ನಿಮ್ಮ ಉತ್ತರವನ್ನು ನಾನು ಗ್ರಹಿಸಿಯಾಯ್ತು ಹೌದು ಇದು ನಮ್ಮ ನಾಡು ನಮ್ಮ ಮಲೆನಾಡು ನಾವು ಮಲೆನಾಡಿನ ತವರೂರಿನವರು ಎಂದು ಹೇಳುತ್ತಾ ರಮ್ಮಿಯನ್ನು ಕರೆದು ಅಣ್ಣನ ಸಂತೋಷ ನೋಡು.
ಹೌದು ನಾನು ನನ್ನವರೊಂದಿಗೆ ಕುಪ್ಪಳ್ಳಿಯಲ್ಲಿ ಕುವೆಂಪುರವರ ಮನೆಯಲ್ಲಿದ್ದೆ ಅದನ್ನು ನೋಡಲಿಕ್ಕಾಗಿಯೇ ನಾವೆಲ್ಲರೂ ಬೆಳಗ್ಗೆ ಬೇಗನೆ ಎದ್ದು ಎಲ್ಲ ಸಿದ್ದತೆಯೊಂದಿಗೆ ಶಿವಮೊಗ್ಗದಿಂದ ಹೊರಟೆವು, ಇದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಅನ್ನು' ಅಂದರೆ ಅನ್ನು' ಬಹಳ ಸಲ ಇಲ್ಲಿ ಬೇಟಿ ನೀಡಿದ್ದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಯಾವಾಗಲು ಅನ್ನು ಮೆಲುಕುಹಾಕುವುದನ್ನು ಕೇಳುತ್ತಲೇ ಇದ್ದೆ, ಹಿಂದಿನ ದಿನ ಮಳೆ ಬಂದು ಶಿವಮೊಗ್ಗದ ತುಂಬ ತಂಪು ಹವಾಮಾನ ಬೆಳಗ್ಗೆ ಹೊರಡುವಾಗ ಇಬ್ಬನಿ ಮಳೆ ಟಾಟ ಸುಮೋದಲ್ಲಿ ಎಲ್ಲರು ಹತ್ತಿ ಹೊರಟಾಗ ಅಂತ್ಯಾಕ್ಷರಿ ಹಾಡುತ್ತಾ ಇಬ್ಬನಿ ಮಳೆಯನ್ನು ಸವಿಯುತ್ತ ಹೊಸಳ್ಳಿ, ಗಾಜನೂರು , ಮಂಡಗದ್ದೆ ಮುಡುಬ ,,,,,ತೀರ್ಥಹಳ್ಳಿ ದಾರಿಯುದ್ದಕ್ಕೂ ಕಾಡು, ತೊರೆ , ಜರಿ , ನೀರ ಧಾರೆ ಪ್ರಾಣಿಗಳನ್ನು ನೋಡುತ್ತಾ ಎಲ್ಲವನ್ನು ಸವಿಯುತ್ತ ಫೋಟೋ ತೆಗೆಯುತ್ತ ಬಂಡೆಗಳ ಮದ್ಯಇಂದ ಹರಿಯುವ ನೀರನ್ನು ಆಸ್ವಾದಿಸುತ್ತಾ ದಾರಿ ಸರಿದದ್ದೇ ತಿಳಿಯಲಿಲ್ಲ ದಾರಿಯುದ್ದಕ್ಕೂ ತುಂಗೆ ನಮ್ಮನ್ನು ನೋಡುತ್ತಲೇ ಹರಿಯುತ್ತಿದ್ದಳು,
ಹೀಗೆ ಮೊದಲು ಹೋಗಿ ಇಳಿದದ್ದು ಕುವೆಂಪುರವರ ಕವಿಶೈಲದಲಿ ಅಲ್ಲಿ ಇದ್ದ ಗೈಡ್ ಅನ್ನುವಿನ ಪರಿಚಯದ ವ್ಯಕ್ತಿ. ನಮ್ಮನು ನೋಡಿದಾಕ್ಷಣ ಸಂತೋಷದಿಂದ ಬರಮಾಡಿಕೊಂಡು ಎಲ್ಲರಿಗು ಅಲ್ಲಿಯ ಬಗ್ಗೆ ಎಲ್ಲವನ್ನು ಹೇಳುತ್ತಾ ಕುವೆಂಪುರವರ ಜೀವನ ದ ಕೆಲವು ಹಂತಗಳನ್ನು ವಿವರಿಸುತ್ತ ತನ್ನ ಕಂಠಪಾಠ ನಮಗೆ ಒಪ್ಪಿಸಿದ ರೀತಿ ನಿಜಕ್ಕೂ ಸಂತೋಷ ಗೊಳಿಸಿತು. ಅಲ್ಲಿ ಕವಿಶೈಲದಲಿ ಸುತ್ತಲು ಕಾಡು ಮತ್ತು ಬೆಟ್ಟಗಳು ಅದೊಂದು ರಮಣೀಯ ಸ್ತಳ ಶಾಂತ ಪ್ರಕೃತಿ ಸಮಾಧಾನದ ನಿಶ್ಯಬ್ಧ .
ಹೀಗೆ ಮುಂದುವರೆದು ಮತ್ತೆ ಹೋದದ್ದು ಕುವೆಂಪುರವರ ಮನೆಗೆ. ಕವಿಶೈಲದಿಂದ ಕಾಲು ದಾರಿಯು ಇದೆ ಅಲ್ಲಿ ತಲುಪಿ ಎಲ್ಲರು ವಾಹನದಿಂದ ಇಳಿದು ಯಾರು ಮಾತನಾಡಲಿಲ್ಲ ಎಲ್ಲರು ನಿಟ್ಟುಸಿರು ಬಿಟ್ಟು ನೋಡುತ್ತಾ ನಿಂತದ್ದು ಆ ಮನೆ, ಅದೊಂದು ಸ್ವರ್ಗ ' ಎಲ್ಲರು ಒಬ್ಬರ ಮುಖ ಒಬ್ಬರು ನೋಡುತ್ತಾ ಒಳಗೆ ತಲುಪಿದೆವು ಅಲ್ಲಿ ಎಡಭಾಗದಲ್ಲಿ ಹೊರಗೆ ನಲ್ಲಿ ಕಂಡಿತು ಅದರ ನೀರು ನಮ್ಮನ್ನೆಲ್ಲ ಮೂಕರನ್ನಾಗಿ ಮಾಡಿತು ಅಲ್ಲಿಂದ ಮನೆಯ ಒಳಗೆ ಒಂದೊಂದೇ ಹಂತಗಳನ್ನು ಗೈಡ್ ಪರಿಚಯಿಸುತ್ತಾ ಹೊರಟರು ಅದೊಂದು ನೆನಪುಗಳ ಆಗರ ಪ್ರತಿಯೊಂದು ವಸ್ತುಗಳು ತನ್ನದೇ ಆದ ಕಥೆಯನ್ನು ಹೇಳುತ್ತವೆ.
ಒಂದರ ಮೇಲೆ ಒಂದು ಮಾಳಿಗೆ ಮರದ ವಸ್ತುಗಳು ತಂಪಾದ ವಾತವರಣ ಎಲ್ಲವನ್ನು ನೋಡುತ್ತಾ ಒಲ್ಲದ ಮನಸ್ಸಿನಿಂದ ಹೊರಬಂದೆವು ಹಸಿವಾಗತೊಡಗಿತ್ತು ಸ್ವಲ್ಪ ದೂರ ಬಂದು ದಾರಿ ಪಕ್ಕದಲ್ಲೇ ಜರಿಯಾಗಿ ಹರಿಯುತ್ತಿದ್ದ ನೀರ ಧಾರೆಯ ಬಳಿ ಎಲ್ಲರು ಕುಳಿತು ಊಟ ಪ್ರಾರಂಬಿಸಿದೆವು. ಅಲ್ಲಿ ಸ್ವಲ್ಪ ದೂರದಲ್ಲಿ ಬಟ್ಟೆ ಒಗೆಯಲು ಕುಳಿತಿದ್ದ ಮೂರು ಹೆಂಗಸರು ಊರಿನ ಬಗ್ಗೆ ನಾಡಿನ ಬಗ್ಗೆ ಕುಶಲೋಪರಿ ಮಾತನಾಡ ತೊಡಗಿದರು.
ನಾವು ತಂದಿದ್ದ ಜಾಮೂನ್ ತಿಂದು ಇನ್ನು ಇದೆಯಾ ಅಂತ ಕೇಳಿದರು ಇಲ್ಲ ಮುಗಿಯಿತು ಎಂದು ಹೇಳಿದಾಗ ಜಾಮೂನ್ ಮಾಡಿದವರು ಯಾರು ಅಂತ ಕೇಳುತ್ತಾ ಬಹಳ ರುಚಿಯಾಗಿದೆ ಎಂದರು, ಅದಕ್ಕೆ ನಾನಂದೆ ನನ್ನ ಅಕ್ಕನ ಮಗಳು ರಮ್ಮಿ ಜಾಮೂನ್ ಮಾಡಿದ್ದು ಎಂದು ಹೇಳುತ್ತಾ ನಾನು ಕೆಲವು ಫೋಟೋಗಳನ್ನು ತೆಗೆದೆ ಕಾಡಿನಲ್ಲಿ ನೀರ ತೊರೆ ಬಂಡೆಗಳು ತಂಪಾದ ಹವಾಮಾನ ಪಕ್ಷಿಗಳ ಇಂಪಾದ ಶಬ್ದ ಇಬ್ಬನಿ ಮಳೆ ದೂರ ದೂರದಲ್ಲಿ ಮನೆಗಳು ದಾರಿ ಮದ್ಯದಲ್ಲಿ ಅಪರೂಪಕ್ಕೊಮ್ಮೆ ಎದುರಾಗುವ ಬಸ್ಸುಗಳ ಕರ್ಕಶ ಹಾರ್ನ್ ಶಬ್ದ ಅಲ್ಲಲ್ಲಿ ಗೋಪ್ಪೆ ಹೊದ್ದು ಹೋಗುತ್ತಿರುವ ಮನುಷ್ಯರು ರಸ್ತೆಯ ಮೇಲು ಹರಿಯುವ ನೀರ ನೆರಿಗೆಗಳು ,,,,,,,,,, ,,,,,, ...
(ಹೆಚ್ಚಿನ ಫೋಟೋಗಳು ಇಲ್ಲಿ ನೋಡಿ http://picasaweb.google.com/IsmailMkShivamogga/KuppalliKuvempuHouse# )

Sunday, 13 September 2009

ನಿಮ್ಮ ಶರೀರದ ಯಾವುದೇ ಭಾಗವನ್ನು ಹೊರ ಚಾಚ ಬೇಡಿ

ಇತ್ತೀಚಿಗೆ ಟಿ ವಿ ಯಲ್ಲಿ ನೆಟ್ಟಲ್ಲಿ ಎಲ್ಲಿ ನೋಡಿದರು ಒಂದು ವಿಶೇಷ ಚರ್ಚೆ ನಿಮಗೆಲ್ಲ ಗೊತ್ತೇ ಇದೆ. ಕೆಲವು ದಿನಗಳ ಹಿಂದೆ ಅರ್ದಂಬರ್ದ ಬಟ್ಟೆ ಹಾಕಿದ್ದರು ಎಂದು ಗಲಾಟೆ ನಡೆಯಿತು. ಈಗ ನಡೆದದ್ದು ಪೂರ್ತಿ ಬಟ್ಟೆ ಹಾಕಿದ್ದಾರೆ ಅಂತ. ಇದೆಲ್ಲ ಕೇಳುತ್ತಾ ನೋಡುತ್ತಾ ಇದ್ದ ನನಗೆ ನೆನೆಪಾದದ್ದು ಒಂದು ವಿಶೇಷ ದಿನದ ಅಂದಿನ ನಾನು ಮತ್ತು ಪರೇಶ ದಾವಣಗೆರೆಗೆ ಒಂದು ಮದುವೆಗೆ ಹೋಗಿ ಬರುವಾಗ ನಡೆದ ಬಸ್ಸಿನಲ್ಲಿನ ಘಟನೆ.

ಬೆಳಗ್ಗೆ ಬೇಗ ರೆಡಿಯಾಗಿ ನಾನು ಪರೇಶ ಶಿವಮೊಗ್ಗದ ಬಸ್ಟಾಂಡ್ ನಿಂದ ದಾವಣಗೆರೆ ಬಸ್ಸು ಹತ್ತಿ ದಾವಣಗೆರೆ ತಲುಪಿ ಮದುವೆ ಮತ್ತು ಊಟ ಮುಗಿಸಿ ಸಮಾಜಸೇವೆಯಲ್ಲಿ ತೊಡಗಿದ್ದ ಪರೆಶನನ್ನು ಕರೆದುಕೊಂಡು ದಾವಣಗೆರೆಯಿಂದ ಶಿವಮೊಗ್ಗದ ಬಸ್ಸು ಹತ್ತಿ ಕೂತೆ. ಬಸ್ಸಲ್ಲಿ ಅಷ್ಟೇನೂ ಜನ ಇರಲಿಲ್ಲ ಕಾರಣ ಭಾನುವಾರ ಬೇರೆ, ಇನ್ನೇನು ಬಸ್ಸು ಹೊರಡ ಬೇಕು ಎನ್ನುವಷ್ಟರಲ್ಲಿ ೫-೬ ಹುಡುಗಿಯರೂ ಮತ್ತು ೨ ಹುಡುಗರು ಬಸ್ಸು ಹತ್ತಿದರು ಅವರನ್ನು ನೋಡುತ್ತಿದ್ದಂತೆಯೇ ತಿಳಿಯಿತು ಮೆಡಿಕಲ್ ವಿದ್ಯಾರ್ಥಿಗಳು ಅಂತ. ಅಲ್ಲಿಗೆ ಬಸ್ಸಿನಲ್ಲಿ ಸುಮಾರು ೨೫ ರಿಂದ ೩೦ ಜನ ಆದರು. ಬಸ್ಸು ಹೊರಟಿತು.

ಆ ಹುಡಗಿಯರು ಸ್ವಲ್ಪ ಮಾಡ್ ಇದ್ದರು, ಅಂದರೆ ಅವರ ಬಟ್ಟೆ ಸ್ವಲ್ಪ ಬಿಗಿಯಾಗಿ, ಕಡಿಮೆಯಾಗಿ, ಶರೀರದ ಉಬ್ಬು ತಗ್ಗುಗಳು ಆಚೆ ಈಚೆ ಬಾಗಿದಾಗ ಶರೀರ ಕಾಣುತಿತ್ತು. ಅದಲ್ಲದೆ ಒಂದೆಡೆ ಕೂರದೆ ಆ ಹುಡುಗಿಯರು ಇಲ್ಲಿಂದ ಅಲ್ಲಿಗೆ ಓಡುವುದು ಕೂಗುವುದು ಕೆಲ ಚಿಕ್ಕ ಪುಟ್ಟ ವಸ್ತುಗಳನ್ನು ಆಚೆ ಈಚೆ ಎಸೆಯುತ್ತ ಅಂದರೆ ತಮ್ಮ ಸ್ನೇಹಿತರೊಂದಿಗೆ ಆಡುತ್ತ ಗಲಾಟೆ ಮಾಡುತ್ತಿದ್ದರು.

ಇದೆಲ್ಲ ನೋಡುತ್ತಾ ಎಲ್ಲರು ಸುಮ್ಮನೆ ಕುಳಿತಿದ್ದರು, ಆದರೆ ಪರೆಶನಿಗೆ ಮಾತ್ರ ಅವರ ನಾಟಕ ಸಹಿಸಲು ಸಾಧ್ಯವಾಗುತ್ತಿಲ್ಲ, ಒಮ್ಮೆ ನನ್ನ ಕಡೆ ನೋಡುತ್ತಾ ಒಮ್ಮೆ ಅವರ ಕಡೆ ನೋಡುತ್ತಾ ಏನ್ಸಾರ್ ಇದು ಒಳ್ಳೆ ತಿಕ್ಲು ಹಿಡಿದಂಗೆ ಮಾಡ್ತಾವ್ರೆ ಅಂದ, ಅದಕ್ಕೆ ನಾನಂದೆ ಏನಾರು ಮಾಡ್ಕೊಳ್ಳಿ ನೀ ಸುಮ್ನೆ ಕೂತ್ಕೋ ಅಂದೇ, ಕಾರಣ ನನಗೆ ಹೆದರಿಕೆ ಹುಡುಗಿಯರು ಅಂದಮೇಲೆ ಕೇಳಬೇಕ ಬಸ್ಸಿನ ಜನ ಎಲ್ಲ ಸೇರಿಕೊಂಡು ನಮ್ಮನ್ನ ಹೊಡೆಯೋದು ಗ್ಯಾರಂಟಿ. ಅದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಹುಡಗಿಯರು ಹೇಳಿದ್ದು ಸರಿ ಮಾಡಿದ್ದು ಸರಿ. ಹೀಗಿರುವಾಗ ಮದುವೆ ಊಟ ಬಸ್ಸಲ್ಲಿ ಖಾಲಿಯಾಗಬಹುದು.

ಇದ್ದಕಿದ್ದಂತೆ ಪರೇಶ ಎದ್ದು ನಿಂತು ಜೋರಾಗಿ ಎ ನೀವೇನ್ ಪ್ರಾಣಿಗಳ ಮನುಷ್ಯರ ಸುಮ್ನೆ ಕುನ್ತುಕೊಳ್ರೆ ಸಾಕು ನಿಮ್ ನಾಟ್ಕ. ಇದು ನಿಮ್ ಮನೆ ಅಲ್ಲ ಸಾರ್ವಜನಿಕ ಬಸ್ಸು ಅಂದ, ಅಷ್ಟರಲ್ಲಿ ಒಂದು ಹುಡುಗಿ ಎದ್ದು ನಿಂತು ನಿಮ್ ಅಪ್ಪಂದ ಬಸ್ಸೂ ಕುಂತ್ಕೋ ಸಾಕು ಅಂದು ಬಿಟ್ಟಳು. ಅಷ್ಟು ಸಾಕಿತ್ತು ಪರೆಶಂಗೆ ಶುರು ಮಾಡಿದ ಭಾಷಣ ಅಲ್ವೇ ಹಲ್ಕಾ ಮುಂಡೆ ನಂ ಅಪ್ಪಂದ್ ಬಸ್ ಆಗಿದ್ರೆ ನಿನಿಗೆಲ್ಲೇ ಹತಾಕ್ ಬಿಡ್ತಿದ್ದೆ ಕೆರ ತಗೊಂಡು ಹೊಡಿತೀನ್ ನೋಡು ಕುಂತ್ಕೊಳೆ ಸಾಕು. ಇಲ್ಲಿ ಬಸ್ಸಲ್ಲಿ ದೊಡ್ದವರು ಚಿಕ್ಕವರು ಮನುಷ್ಯರು ಕುಂತಿದಾರೆ ಅಂತ ಗೊತ್ತಿಲ್ಲ ಸ್ವಲ್ಪ ಮರ್ಯಾದೆ ಕಲ್ತ್ಕೊಳೆ ಬರಿ ಕಾಲೇಜ್ ಹೋದ್ರೆ ಸಾಕಿಲ್ಲ ಬೆವರ್ಸಿಗಳ ಅಂತ ಬೈದ, ಚಿಕ್ಕ ಚಿಕ್ಕ ಬಟ್ಟೆ ಹಾಕೊಂಡು ಮೈ ತೋರಿಸ್ಕೊಂಡು ಎನಿದ್ ನಿಮ್ ನಾಟ್ಕ ಅಂದ.

ನಾವೇನಾದ್ರೂ ಮಾಡ್ತೀವಿ ನಿಂದೇನ್ ರೂಲ್ಸ್ ಮುಚ್ಕೊಂಡ್ ಕುಂತ್ಕೋ ಅಂದ್ಲು ಮತ್ತೊಂದು ಹುಡುಗಿ. ಹೌದೆ ರೂಲ್ಸ್ ಕಣೆ ನಾನ್ ಮಾಡಿದ್ದಲ್ಲ ಬಸ್ಸಲ್ಲಿ ಬರ್ದೈತ ನೋಡ್ಬಾ ಇಲ್ಲಿ, ಎಲ್ಲ ಬಾಳ ಓದಿದೀರಲ್ಲ ಇಲ್ಲೇನ್ ಬರ್ದೈತೆ ನೋಡೇ ನಿರ್ವಾಹಕರ ಆಸನ - ಟಿಕೇಟು ಕೇಳಿ ಪಡೆಯಿರಿ - ಧೂಮಪಾನ ನಿಷೇದಿಸಿದೆ - ಇಲ್ ನೋಡು ದೊಡ್ ದಾಗ್ ಏನ್ ಬರ್ದೈತೆ
" ನಿಮ್ಮ ಶರೀರದ ಯಾವುದೇ ಭಾಗವನ್ನು ಹೊರ ಚಾಚ ಬೇಡಿ " ಇದು ಯಾಕ ಬರ್ದಿದಾರೆ ಅಂತ ಹೇಳುದ್ರೆ ನಿಮ್ಮಂತ ಹುಡುಗಿಯರು ಕಡಿಮೆ ಬಟ್ಟೆ ಹಾಕಿ ಮೈ ಯಲ್ಲ ತೋರಿಸ್ತಾರಲ್ಲ ಅದಕ್ಕೆ ಬರ್ದಿರೋದು. ಇಷ್ಟು ಹೇಳುತ್ತಿದ್ದಂತೆ ಇಡಿ ಬಸ್ಸೂ ಗೊಳ್ಳೆಂದು ನಗತೊಡಗಿತು ಅಷ್ಟರಲ್ಲಿ ಪರಿಸ್ಥಿತಿಯ ಒತ್ತಡ ಅರಿತ ಹುಡುಗಿಯರು ಸುಮ್ಮನಾಗಿ ಬಿಟ್ಟರು.

ಅಷ್ಟರಲ್ಲಿ ನಾನು ಪರೆಶನ ಹತ್ರ ನಿಧಾನವಾಗಿ ಅಲ್ಲ ಕಣೋ ಪರೇಶ ಅದರ ಅರ್ಥ ಹಂಗಲ್ಲ ಕಣೋ ಅನ್ನು ವಷ್ಟರಲ್ಲಿ ಸಾರ್ ಸುಮ್ನೆ ಕೂರ್ತೀರ ಸ್ವಲ್ಪ ಇಷ್ಟ ಹೊತ್ತು ನಿಮ್ಮ ಅರ್ಥ ಎಲ್ಲ ಎಲ್ ಹೋಗಿತ್ತು ಬಂದ್ ಬಿಟ್ಟ್ರು ಅರ್ಥ ಹೇಳಾಕ್ಕೆ. ಅದು ಸರಿಯಾಗೇ ಬರ್ದಿರೋದು ಇದು ಹುಡುಗಿಯೋರಿಗೆ ಬರ್ದಿರೋದು.

ಈ ಬೋರ್ಡ್ ಎಲ್ಲ ಕಡೆ ಬರಿ ಬೇಕು ಸಾರ್ " ನಿಮ್ಮ ಶರೀರದ ಯಾವುದೇ ಭಾಗವನ್ನು ಹೊರ ಚಾಚ ಬೇಡಿ " ಅಂತ
,,,,,,,, ?
ಹಂಗಾದ್ರು ಸರ್ಯಾಗತಾವೇನೋ ನೋಡ್ಬೇಕು ಅಂತ ಶುರು ಮಾಡಿದ ,,,,,,,,

ಯಾರಿವಳು ?

ಅವಳು ನನ್ನ ಕಾಡುತ್ತಾಳೆ ಅವಳು

ನನ್ನ ಓರೆ ಕಣ್ಣಿನಲ್ಲಿ ನೋಡುತ್ತಾಳೆ

ಅವಳು ನನ್ನ ಮುಂದೆ ಓಡುತ್ತಾಳೆ

ಅವಳು ನನ್ನ ಮುಂದೆ ಆಡುತ್ತಾಳೆ

ಅವಳು ನನ್ನ ನಗಿಸುತ್ತಾಳೆ

ಅವಳು ನನ್ನ ಅಳಿಸುತ್ತಾಳೆ

ಆವಳು ನನ್ನ ಕರೆಯುತ್ತಾಳೆ

ಅವಳು ನನ್ನ ಜರಿಯುತ್ತಾಳೆ

ಅವಳು ನನ್ನ ಮರೆಯುತ್ತಾಳೆ

ಅವಳು ನನ್ನ ನೆನೆಪಿಸಿಕೊಳ್ಳುತ್ತಾಳೆ

ಅವಳು ನನ್ನ ಹೊಡೆಯುತ್ತಾಳೆ

ಅವಳು ನನ್ನ ನೋಡಿ ಕಣ್ಣು ಮಿಟುಕಿಸುತ್ತಾಳೆ

ಅವಳು ನನ್ನ ಪ್ರೀತಿಸುತ್ತಾಳೆ

ಅವಳು ನನ್ನ ಮನೆಗೆ ಬರುತ್ತಾಳೆ

ಅವಳು ಅವಳ ಮನೆಗೆ ನನ್ನ ಕರೆಯುತ್ತಾಳೆ

ಅವಳು ನನ್ನ ನದಿ ದಂಡೆಗೆ ಕರೆಯುತ್ತಾಳೆ

ಅವಳು ನನ್ನ ,,,,,,?

Friday, 4 September 2009

ಸಿಂಗಲ್ ಬೆಡ್ ರೂಂ ಫ್ಲಾಟ್ ೨ ಬೆಡ್ ರೂಂ ಅದಾಗ

ಎಲ್ಲ ತಂದೆ ತಾಯಿಯರ ಆಸೆಯಂತೆ ನಾನು ಸಹ ಸಾಫ್ಟ್ವೇರ್ ಇಂಜಿನಿಯರ್ ಆಗಿ ಅಮೇರಿಕಾ ತಲುಪಿದೆ. ತಲುಪಿದ ಆ ಕ್ಷಣ ನಾನು ಆಕಾಶದಲ್ಲಿ ಹಾರುತ್ತ ನಕ್ಷತ್ರಗಳನ್ನು ಎಣಿಸುತ್ತ ಚಂದ್ರನನ್ನು ಮುಟ್ಟುತ್ತ ಪಕ್ಷಿಯಂತೆ ವಿಹರಿಸುತ್ತಾ ಮಳೆಯಲ್ಲಿ ನೀರಾಗಿ ಮುಸುಕಿನಲ್ಲಿ ಮಂಜಾಗಿ ತಂಪಿನಲಿ ಚಳಿಯಾಗಿ ಭಾವನೆಗಳಲಿ ಮಿಂದು ಸ್ವಪ್ನ ಲೋಕದಲಿ ವಿಹರಿಸ ತೊಡಗಿದೆ.

ನನ್ನ ಜೀವನದ ಅತ್ತ್ಯುನ್ನತ ಆಕಾಂಕ್ಷೆಯಾಗಿದ್ದ ಅಮೆರಿಕಾದಲ್ಲಿ ತಲುಪಿದೆನಲ್ಲ ಆಹಾ ನಾನೆಷ್ಟು ಸುಖಿ. ಸಾಕು ಇನ್ನು ೫ ವರ್ಷ ಕಷ್ಟ ಪಟ್ಟು ಬೇಕಾದಷ್ಟು ಹಣ ಮಾಡಿ ಭಾರತಕ್ಕೆ ಹಿಂದಿರುಗುವುದು. ನಂತರ ಒಂದು ಒಳ್ಳ್ಯೇ ಲೈಫ್ ಲೀಡ್ ಮಾಡುವುದು ಬಾಕಿ ಎಲ್ಲ ತನ್ನಷ್ಟಕ್ಕೆ ತಾನೆ ಬರುತ್ತದೆ ಬಿಡು ಮತ್ತೇನು ಬೇಕು ಇದು ನನ್ನ ತೀರ್ಮಾನವಾಗಿತ್ತು.

ಕಾರಣ ನನ್ನ ತಂದೆ ಸರ್ಕಾರಿ ನೌಕರಿಯಲ್ಲಿದ್ದರು ಅದರಿಂದ ಅವರು ಜೀವನದಲ್ಲಿ ಮಾಡಿದ್ದು ಒಂದು ಸಿಂಗಲ್ ಬೆಡ್ ರೂಂ ಫ್ಲಾಟ್ ಅಷ್ಟೆ ಆದರೆ ನಾನು ಹಾಗಾಗಬಾರದು. ಅವರಿಗಿಂತ ಉನ್ನತ ಸ್ಥಾನಕ್ಕೆ ತಲುಪಬೇಕು ಇದೆ ಯೋಚನೆಯಲ್ಲಿ ನಾನು ಕೆಲಸದಲ್ಲಿ ಮುಳುಗಿದೆ ಆದರೆ, ಕೆಲವೇ ದಿನಗಳಲ್ಲಿ ನನಗೆ ನನ್ನ ಊರು ನೆನಪಾಗತೊಡಗಿತು ಮತ್ತೆ ಮತ್ತೆ ಒಂಟಿತನ ಕಾಡತೊಡಗಿತು. ಪ್ರತಿ ವಾರ ಊರಿಗೆ ಫೋನ್ ಮಾಡಿ ಮಾತನಾಡತೊಡಗಿದೆ ಅದರಲ್ಲೂ ಕಡಿಮೆಬೆಲೆಯಲ್ಲಿ ಲಬ್ಯವಿರುವ ಅಂತರಾಷ್ಟ್ರೀಯ ಕರೆಗಳನ್ನು ಮಾಡುವ ಕಾರ್ಡುಗಳನ್ನು ಹುಡುಕಿ ತೆಗೆದು ತಂದು ಊರಿಗೆ ಕರೆಗಳನ್ನು ಮಾಡತೊಡಗಿದೆ. ಹೀಗೆ ೨ ವರ್ಷ ಕಳೆದು ಹೋಯಿತು ಅದು ಹೇಗೆ ಕಳೆದು ಹೋಯಿತು ಎಂಬುದು ತಿಳಿಯಲಿಲ್ಲ ಕಾರಣ ನಾನು ಲೆಕ್ಕ ಚಾರಗಳಲ್ಲಿ ಮುಳುಗಿದ್ದೆ ತಿಂಡಿ ತಿಂದದ್ದು ಊಟ ಮಾಡಿದ್ದು ಸೋಪು ತಂದದ್ದು ಹೇರ ಕಟ್ ಮಾಡಿಸಿದ್ದು, ಬರೆಯುವುದು. ಶೇವ್ ಮಾಡುವ ಖರ್ಚನ್ನು ಕಡಿಮೆ ಮಾಡುವ ಉದ್ದೇಶದಿಂದ ಗಡ್ಡ ಬಿಡುವುದು ಶುರುಮಾಡಿದೆ. ಬೆಳಗ್ಗೆ ತಿಂಡಿಗೆ ಬ್ರೆಡ್ಡನ್ನು ಟೀ ಯಲ್ಲಿ ಅದ್ದಿ ತಿನ್ನ ತೊಡಗಿದೆ. ಆಫಿಸಿಗೆ ನಡೆದುಕೊಂಡು ಹೋಗತೊಡಗಿದೆ ಅದಕ್ಕಾಗೆ ಮುಂಜಾನೆ ೨ ಗಂಟೆ ಬೇಗ ಏಳತೊಡಗಿದೆ ಇದರಿಂದ ಬಸ್ಸಿನ ಹಣ ಉಳಿಯತೊಡಗಿತು, ರಾತ್ರಿ ಬೇಗ ಲೈಟ್ ಆಫ್ ಮಾಡಿ ಮಲಗಿಬಿಡುತ್ತಿದ್ದೆ.

ಎಷ್ಟೆಲ್ಲ ಆದರು ಒಂದು ಕೊರತೆ ಕಾಡುತ್ತಲೇ ಇತ್ತು ಅದು ಮದುವೆ ಎಂಬ ವಿಷಯ ಅದರ ಯೋಚನೆಯಲ್ಲಿಯೇ ೫ ವರ್ಷಗಳು ಕಳೆದುಹೋಯ್ತು, ಕಾರಣ ಊರಿಗೆ ಹೋಗಲು ರಜಾ ಸಿಗುತ್ತಿರಲಿಲ್ಲ ಈ ಸಾರಿ ಅದ್ಹೇಗೋ ೧೦ ದಿನದ ರಜಾ ಸಿಕ್ಕಿತು. ಕೂಡಲೇ ತಂದೆ ತಾಯಿಯರಿಗೆ ತಿಳಿಸಿ ಹೊರಟೆ, ಇಲ್ಲಿ ಬಂದು ನೋಡಿದಾಗ ೮-೧೦ ಹುಡುಗಿಯರ ಫೋಟೋಗಳು ತಯಾರಾಗಿದ್ದವು ಅಮೆರಿಕಾದ ಗಂಡಿಗೆ ಹೆಣ್ಣುಗಳ ಕೊರತೆ ಇದೆಯೇ ಎಂಬಂತೆ, ಆದರೆ ಮನಸ್ಸಿಗೆ ಯಾವುದು ಇಷ್ಟವಾಗಲಿಲ್ಲ ಆದರೆ ಏನು ಮಾಡುವುದು ೧೦ ದಿನದಲ್ಲಿ ೫ ರಜಾ ಮುಗಿದಿತ್ತು ಯಾವುದೊ ಒಂದನ್ನು ಮದುವೆಯಾಗಿ ಅವಳನ್ನು ಕರೆದುಕೊಂಡು ಅಮೆರಿಕಾಗೆ ಹೊರಟೆ ನಾನು ಮತ್ತೊಂದು ಲೋಕದಲ್ಲಿ ಮುಳುಗಿ ಹೋದೆ.

ಇದ್ದ ಬದ್ದ ಎಲ್ಲಾ ಬ್ಯಾಂಕು ಗಳಿಂದ ಕಾರ್ಡುಗಳನ್ನು ಪಡೆದು ಸಾಲ ಮಾಡಿ ಒಂದು ಕಾರ್ಡನ್ನು ಸರಿದೂಗಿಸಲು ಮತ್ತೊಂದು ಕಾರ್ಡು ಅದನ್ನು ಸರಿದೂಗಿಸಲು ಮತ್ತೊಂದು ಕಾರ್ಡು ಹೀಗೆ ನನ್ನ ಜೀವನ ಎತ್ತಿನ ಗಾಡಿಯ ಎತ್ತುಗಳಂತೆ ಆಚೆ ಈಚೆ ಮಾಡುತ್ತಾ ಕಾಲ ದೂಕ ತೊಡಗಿದೆ, ಕಾರಣ ಇಲ್ಲಿ ಎಷ್ಟು ದುಡಿದರು ಸಾಲದಾಯ್ತು ಮೊದಲು ವಾರಕೊಮ್ಮೆ ತಂದೆ ತಾಯಿಯರಿಗೆ ಫೋನ್ ಮಾಡುತ್ತಿದ್ದವನು ಈಗ ೧೫ ದಿನಗಳಿಗೆ ಆಯಿತು. ಇದಕ್ಕೆಲ್ಲ ಕಾರಣ ನನಗೆ ಆದ ೨ ಮಕ್ಕಳು ಈ ರೀತಿ ಖರ್ಚು ಹೆಚ್ಚುತ್ತಾ ಹೋಯ್ತು ಅವರ ಸ್ಕೂಲು ಅವರ ಬಟ್ಟೆ ಊಟ ಖರ್ಚು ಒಂದೋ ಎರಡೋ, ಉಳಿತಾಯವಂತು ಇಲ್ಲ ಸಾಲ ಹೆಚ್ಚುತ್ತಾ ಹೋಯ್ತು. ಪ್ರತಿ ದಿನಾ ಊರಿಗೆ ಹೋಗುವುದರ ಬಗ್ಗೆ ಯೋಚಿಸುತ್ತಿದ್ದೆ ಅದು ಕನಸಾಗೆ ಉಳಿಯುತ್ತಿತ್ತು ಕಾರಣ ಹೆಚ್ಚಿದ ಜೀವನ ವೆಚ್ಹ, ಕೆಲಸದ ಅನಿಶ್ಚಿತತೆ. ಇದೆಲ್ಲವೂ ಸರಿದೂಗಿಸಿ ಒಮ್ಮೆ ಊರಿಗೆ ಹೋಗಬೇಕೆಂಬ ಆಸೆ ಹೀಗಿರುವಾಗಲೇ ಒಂದು ಮುಂಜಾನೆ ಊರಿಂದ ಫೋನ್ ಬಂತು ತಂದೆ ತಾಯಿಯರ ಮರಣ ವಾರ್ತೆ ಅದು ಹೇಳಲು ಸಾಧ್ಯವಿಲ್ಲದಂತಹ ಒಂದು ಮರಣ ವಾರ್ತೆ ಆದರೆ ನಾನು ಊರಿಗೆ ಹೋಗಲು ಸಾಧ್ಯವಾಗಲಿಲ್ಲ, ಅಂತ್ಯ ಕರ್ಮಗಳನ್ನೆಲ್ಲ ಅಕ್ಕ ಪಕ್ಕದವರು ಮಾಡಿ ಮುಗಿಸಿದರು.

ಹೀಗೆ ಸುಮಾರು ವರುಷಗಳು ಕಳೆದು ಹೋದವು ಇತ್ತೀಚಿಗೆ ಮಕ್ಕಳು ದೊಡ್ಡವರಾದಂತೆ ಅವರದೇ ಆದ ಪ್ರಪಂಚದಲ್ಲಿ ಅವರು ಮುಳುಗಿಹೋದರು ಇಲ್ಲಿಯ ವಾತವರಣದಲ್ಲಿ ಬೆಳೆದ ಈ ಮಕ್ಕಳು ಊರಿನ ಬಗ್ಗೆ ಕಿಂಚಿತ್ತು ಮಾತನಾಡುತ್ತಿರಲಿಲ್ಲ ಅವರು ಇಲ್ಲಿಗೆ ಒಗ್ಗಿ ಹೋಗಿದ್ದರು. ಆದರೆ ನನಗೆ ಏಕತಾನತೆ ಕಾಡ ತೊಡಗಿತು. ಈ ಮದ್ಯೆ ನಾನು ಸ್ವಲ್ಪ ಹಣ ಉಳಿಸತೊಡಗಿದ್ದೆ ಕಾರಣ ತಂದೆ ತಾಯಿಯರಿಗೆ ಆಗೀಗ ಅಂತ ಕಳಿಸುವ ಗೋಜು ಇರಲಿಲ್ಲ, ಅಲ್ಲದೆ ಮಕ್ಕಳು ಅವರು ದುಡಿದು ಅವರ ಖರ್ಚು ವೆಚ್ಚಗಳನ್ನು ಅವರೇ ಭರಿಸುವಂತೆ ಆಗಿದ್ದರು. ಹಾಗಾಗಿ ನಾನು ಒಂದು ತೀರ್ಮಾನಕ್ಕೆ ಬಂದು ಊರಲ್ಲಿ ಒಂದು ಮನೆ ಕೊಳ್ಳುವ ಎಂದು ನಿರ್ಧರಿಸಿದೆ ಹೇಗೂ ತಂದೆ ತಾಯಿಯರ ಸಿಂಗಲ್ ಬೆಡ್ರೂಮ್ ಫ್ಲಾಟ್ ಇದೆ ಅದನ್ನು ಮಾರಿ ಈ ಹಣವನ್ನು ಸೇರಿಸಿ ಒಂದು ದೊಡ್ಡ ಮನೆಯನ್ನು ಕೊಂಡು ಊರಲ್ಲಿ ಸ್ಥಿರವಾಗಿ ಇದ್ದು ಬಿಡೋಣ ಅಂತ ತೀರ್ಮಾನಿಸಿದೆ.

ಊರಿಗೆ ಬಂದು ನಾನು ಮನೆ ಹುಡುಕ ತೊಡಗಿದೆ ಆದರೆ ನನ್ನ ಊಹೆಗೆ ಯಾವುದು ನಿಲುಕದ ಹಾಗೆ ಬೆಲೆಗಳು ಆಕಾಶ ತಲುಪಿದ್ದವು. ಎಲ್ಲ ಸೇರಿ ನಾನು ಒಂದು ಸಾದಾರಣ ಬಡಾವಣೆಯಲ್ಲಿ ೨ ಬೆಡ್ ರೂಂ ಫ್ಲಾಟ್ ಕೊಳ್ಳಲು ಸರಿಯಾಯ್ತು ಆ ಸಮಾಧಾನದಲ್ಲಿ ಮನೆಗೆ ಬಂದು ಇಳಿದ ಮಾರನೆ ದಿನ ಮಕ್ಕಳು ಅಮೆರಿಕಾಗೆ ಹಿಂದಿರುಗಲು ತಯಾರಾದವು, ನಾನು ಎಷ್ಟು ಹೇಳಿದರು ಅವರು ಇಲ್ಲಿರಲು ಕೇಳಲಿಲ್ಲ ಅದಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ ಅವರೊಟ್ಟಿಗೆ ನನ್ನ ಹೆಂಡತಿಯೂ ಹೊರಟು ನಿಂತಳು.

ನಾನೀಗ ೨ ಬೆಡ್ರೂಮ್ ಫ್ಲಾಟ್ನಲ್ಲಿ ಒಬ್ಬನೇ ಇದ್ದೇನೆ ಆಗಾಗ ಪ್ರಾರ್ಥನಾ ಮಂದಿರಕ್ಕೆ ಹೋಗುತ್ತೇನೆ, ಕೆಲೊಮ್ಮೆ ಕಿಟಕಿಯ ಬಳಿ ಕುಳಿತು ಹೊರಗೆ ನೋಡುತ್ತೇನೆ ಬಿಳಿ ಶುಬ್ರ ಆಕಾಶ ನನ್ನಿಂದ ದೂರ ಕಾಣುತ್ತದೆ, ಪಕ್ಷಿಗಳು ಸಹ ದೂರ ಹಾರುತ್ತಿರುತ್ತವೆ, ಮಳೆ ಬಂದರು ಸಹ ಅದು ತಿಳಿಯಂದಂತೆ ನಾನು ಮಲಗಿದ್ದಾಗ ಬಂದು ಹೋಗಿರುತ್ತದೆ. ನಕ್ಷತ್ರಗಳು ಕಾಣುವುದಿಲ್ಲ ಚಂದಿರನು ಸಹ ಕಾಣ ಅಕ್ಕ ಪಕ್ಕದಲ್ಲೆಲ್ಲ ದೊಡ್ಡ ದೊಡ್ಡ ಕಟ್ಟಡಗಳು ನಾನು ಮಾತ್ರ ಕಿಟಕಿಯ ಒಳಗೆ ಒಬ್ಬನೇ ದೂರದಲ್ಲಿ ಮಕ್ಕಳು ಆಡುವುದನ್ನು ನೋಡುತ್ತೇನೆ, ಮದ್ಯೆ ಮದ್ಯೆ ಕಟ್ಟಡಗಳ ನಡುವೆ ಕೇಬಲ್ ಟಿ ವಿ ವೈಯರುಗಳು ಜೋತುಬಿದ್ದಿವೆ. ಅದರಲ್ಲಿ ಕೆಲೊಮ್ಮೆ ಹಾರಿ ಹಾರಿ ಸೋತು ಸುಸ್ತಾದ ಕೆಲವು ಪಕ್ಷಿಗಳು ಬಂದು ಅಲ್ಲಿ ಕೂರುತ್ತವೆ ನನ್ನಂತೆ, ಆದರೆ ಮರು ಕ್ಷಣದಲ್ಲೇ ಮತ್ತೆ ಮೇಲಕ್ಕೆ ಹಾರುತ್ತವೆ ಆದರೆ ನಾನು ಮಾತ್ರ ಇಲ್ಲೇ ಕುಳಿತಿರುತ್ತೇನೆ.

ನನ್ನ ಮಕ್ಕಳು ಅಮೆರಿಕಾದಲ್ಲಿ ನನ್ನವಳು ಅಷ್ಟೆ. ಅಪರೂಪಕ್ಕೊಮೆ ನಾನೇ ಅವ್ರಿಗೆ ಫೋನು ಮಾಡುತ್ತೇನೆ ಕಾರಣ ಅವ್ರು ಕೆಲಸದಲ್ಲಿ ಬ್ಯುಸಿ ಇರುತ್ತಾರೆ. ಇತ್ತೀಚಿಗೆ ನನ್ನ ಆರೋಗ್ಯ ಸರಿಯಿಲ್ಲ ಆದರು ನಾನು ನನ್ನ ಊರಿನಲ್ಲಿದ್ದೇನೆ ಎಂಬ ಸಮಾಧಾನ ನನಗೆ, ಕಾರಣ ನಾನು ಸತ್ತರೆ ನನ್ನ ಅಕ್ಕ ಪಕ್ಕದವರು ನನ್ನ ಅಂತ್ಯ ಸಂಸ್ಕಾರ ಮಾಡುತ್ತಾರೆ, ನನ್ನ ತಂದೆ ತಾಯಿಯವರಿಗೆ ಸಹ ಹೀಗೆ ಆದದ್ದು. ಈಗ ನನಗೆ ವಯಸ್ಸು ೬೦ ನನ್ನ ತರಹದ ಸ್ನೇಹಿತರು ಯಾರಾದರು ಸಿಗುತ್ತಾರ ಎಂದು ದಿನವು ಹುಡುಕುತ್ತೇನೆ.

ಇಷ್ಟೆಲ್ಲಾ ಆಗಿ ನನಗೆ ಅರ್ಥ ಆಗದ ಒಂದು ವಿಷ್ಯ ನನ್ನ ತಂದೆ ಅಮೆರಿಕಾಗೆ ಹೋಗಲಿಲ್ಲ ಆದರು ಅವರಿಗೆ ಸಿಂಗಲ್ ಬೆಡ್ರೂಮ್ ಫ್ಲಾಟ್ ಇತ್ತು. ಆದರೆ ನನಗೆ ಡಬ್ಬಲ್ ಬೆಡ್ರೂಮ್ ಫ್ಲಾಟ್ ಇದೆ, ಅದೊಂದು ಸಮಾಧಾನ.

ಹಾಗಾದರೆ ನಾನು ಇಷ್ಟೆಲ್ಲಾ ಮಾಡಿದ್ದು ಒಂದು ಬೆಡ್ರೂಮ್ ಹೆಚ್ಚು ಪಡೆಯಲು ಅಲ್ವ,,,?

ಹೌದ ಏನೋ ಗೊತ್ತಿಲ್ಲ ?

ನನ್ನ ಲೆಕ್ಕಾಚಾರಗಳು , ನನ್ನ ಉಳಿತಾಯ ಸ್ಕೀಮುಗಳು , ನನ್ನ ಬ್ಯಾಂಕ್ ಕಾರ್ಡುಗಳು , ಹಾಗಾದರೆ ನಾನು ಜೀವಿಸಿದ್ದು ಜೀವನಕ್ಕಾಗಿಯೋ ಅಥವಾ ಜೀವನಕ್ಕಾಗಿ ನಾನೋ ,?

(೬೦ ವರ್ಷದ ವ್ಯಕ್ತಿ ತನ್ನ ಜೀವನದ ಕಥೆಯನ್ನು ಈ ರೀತಿ ಬರೆದದ್ದು - ಅನುಭವ ಕಥನ )